ನಾನು ಅಪ್ಪನ ರೀತಿ ಎಂದರೆ ಸುಳ್ಳು ಹೇಳಿದಂತಾಗುತ್ತದೆ: ಪುನೀತ್ ರಾಜ್ ಕುಮಾರ್

ಕನ್ನಡ ಸಿನಿಮಾ ದಿಗ್ಗಜ, ವರನಟ ಡಾ. ರಾಜ್ ಕುಮಾರ್ ಅವರ ಹಾದಿಯಲ್ಲೇ ಅವರ ಕಿರಿಯ ಪುತ್ರ ಪುನೀತ್ ಬಾಲ ನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ...
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
Updated on: 

ಬೆಂಗಳೂರು: ಕನ್ನಡ ಸಿನಿಮಾ ದಿಗ್ಗಜ, ವರನಟ ಡಾ. ರಾಜ್ ಕುಮಾರ್  ಅವರ ಹಾದಿಯಲ್ಲೇ ಅವರ ಕಿರಿಯ ಪುತ್ರ ಪುನೀತ್ ಬಾಲ ನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದವರು.

41 ವರ್ಷದ ಪುನೀತ್ ತಮ್ಮ ಅತ್ಯದ್ಭುತ ನಟನಾ ಪ್ರತಿಭೆಯಿಂದ ಲಕ್ಷಾಂತರ ಮಂದಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಅಪ್ಪು ಎಂದೇ ಚಿರಪರಿಚಿತರಾಗಿದ್ದಾರೆ. ಅಪ್ಪು ಅಭಿನಯದ ರಾಜಕುಮಾರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ,

ಅಪ್ಪು ಅಭಿಮಾನಿಗಳು ಮತ್ತು ಕನ್ನಡ ಚಿತ್ರೋದ್ಯಮ ರಾಜಕುಮಾರ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ನಿರ್ದೇಶಕ ಸಂತೋಷ್ ಆನಂದರಾಮ್ ಅವರ ಪ್ರಕಾರ ರಾಜ ಕುಮಾರ ಸಿನಿಮಾಗೂ, ಅಣ್ಣಾವ್ರ ಜೀವನಕ್ಕೂ ಯಾವುದೇ ಸಂಬಂಧವಿಲ್ಲ, ವರನಟರ ಮ್ಯಾನರಿಸಂ ಅನ್ನು ಪುನೀತ್ ಮೂಲಕ  ತೋರಿಸುವ ಪ್ರಯತ್ನವಷ್ಟೇ ಎಂದು ಹೇಳಿದ್ದಾರೆ.

ಆದರೆ ಪುನೀತ್ ಪ್ರಕಾರ, ಅಪ್ಪಾಜಿಗೆ ಅವರೇ ಸಾಟಿ, ಅವರದ್ದೆ ಒಂದು ಬ್ರಾಂಡ್ ಅದನ್ನು ಮ್ಯಾಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು  ಅಪ್ಪು ಹೇಳಿದ್ದಾರೆ.

ಬೆಳ್ಳಿ ತೆರೆಗೆ ಬಾಲನಟನಾಗಿ ಎಂಟ್ರಿ ಕೊಟ್ಟ ನಾನು ಅಪ್ಪಾಜಿ ಹಾದಿಯಲ್ಲೇ ನಡೆದು ಬಂದಿದ್ದೇನೆ, ಇವತ್ತು ನಾನು ಏನಾಗಿದ್ದೀನೋ ಅದಕ್ಕೆಲ್ಲಾ ಅಪ್ಪಾಜಿಯೇ ಕಾರಣ, ಅವರಿಂದಲೇ ನಾನು ಕಲಿತಿರುವುದು. ಅವರೊಬ್ಬ ಅಪ್ರತಿಮ ವ್ಯಕ್ತಿ, ಊಟ ಮತ್ತು ನೀರು ವ್ಯರ್ಥ ಮಾಡಬಾರದೆಂದು ನಮಗೆಲ್ಲಾ ಅವರು ಕಲಿಸಿಕೊಟ್ಟಿದ್ದಾರೆ, ಎಲ್ಲರನ್ನು ಗೌರವಿಸಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. ನಮ್ಮ ಹೃದಯ ಹೇಳುವ ಒಳ್ಳೆಯ ದಾರಿಯನ್ನು ಆರಿಸಿಕೊಳ್ಳುವಂತೆ ಅಪ್ಪಾಜಿ ಸಲಹೆ ನೀಡಿದ್ದರು ಎಂದು ಪುನೀತ್ ತಿಳಿಸಿದ್ದಾರೆ.

ನನ್ನ ತಂದೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ನಾನು ಯೌವ್ವನಕ್ಕೆ ಬಂದ ಮೇಲೆ ಅಪ್ಪನನ್ನು ಅರ್ಥ ಮಾಡಿಕೊಂಡೆ, ಅವರು ತಮ್ಮ ಜೀವನದಲ್ಲಿ ಯಾರೋಬ್ಬರನ್ನು ದ್ವೇಷಿಸಿಲ್ಲ, ಹೀಗಾಗಿಯೇ ಪ್ರತಿಯೊಬ್ಬರು ಅವರನ್ನು ಪ್ರೀತಿಸುತ್ತಿದ್ದರು, ಅವರು ಯಾರೊಬ್ಬರನ್ನು ಬೆಯ್ದಿಲ್ಲ, ಯಾವಾಗಲೂ ಗೌರವದಿಂದಲೇ ಇರುತ್ತಿದ್ದರು. ಅದೇ ಅವರಲ್ಲಿದ್ದ ಉತ್ತಮ ಅಂಶ ಎಂದು ಪುನೀತ್ ಹೇಳಿದ್ದಾರೆ.

ಬಣ್ಣದ ಲೋಕದಿಂದ ಹೊರಬಂದರೇ ಅವರೊಬ್ಬ ತಂದೆ, ವಿನಮ್ರ ಹಾಗೂ ವಿಧೇಯ ಮನುಷ್ಯ, ಜನ ನನ್ನನ್ನು ನನ್ನ ತಂದೆ ಜೊತೆ ಹೋಲಿಕೆ ಮಾಡುತ್ತಾರೆ, ಆದರೆ ನಾನು ವರನಟನ ಮಗ ಎಂಬುದನ್ನೇ ಹೇಳುತ್ತೇನೆ. ತಮ್ಮ ಜೀವಿತಾವಧಿಯಲ್ಲಿ ಕೋಟ್ಯಂತರ ಆದರ್ಶಗಳನ್ನು ತಮ್ಮ ಜೊತೆಗೆ ಇಟ್ಟುಕೊಂಡವರು, ಹಾಗೆ ನಡೆದುಕೊಂಡರು. ಕೆಲ ದೃಶ್ಯಗಳಲ್ಲಿ ನನ್ನ ನಟನೆ ನೋಡಿ ಅಪ್ಪಾಜಿ ಅವರ ರೀತಿಯೇ ನಟಿಸುತ್ತೀರಿ ಎಂದು ಹೇಳುತ್ತಾರೆ, ಆದರೆ ನಾನು ನನ್ನನ್ನು ಅಪ್ಪಾಜಿ ಜೊತೆ ಹೋಲಿಸಬೇಡಿ, ನಾನೇ ಬೇರೆ ಎಂದು ಹೇಳುವುದಾಗಿ ಪುನೀತ್ ತಿಳಿಸಿದ್ದಾರೆ.

ನಾನು ಮಗು, ನನ್ನ ಅಮ್ಮ ನನ್ನನ್ನು ಸಾಕಷ್ಟು ಪ್ರೀತಿ ಮಾಡುತ್ತಿದ್ದರು. ಅಪ್ಪನ ರೀತಿ ನನಗೆ ಶಿಸ್ತು ಇಲ್ಲ, ನಾನು ಬೆಳೆದು ದೊಡ್ಡವನಾದೆ, ನಾನು ಉತ್ತಮವಾದ ಸ್ಥಳಗಳಲ್ಲೇ ಬೆಳೆದೆ. ಆದರೆ ನನ್ನ ತಂದೆ ಆಗಲ್ಲ, ಅವರೊಬ್ಬ ಸರಳ ಮನುಷ್ಯ. ಅವರ ಮಕ್ಕಳು ಎಲ್ಲಿರುತ್ತಾರೋ ಅಲ್ಲೆಲ್ಲಾ ಅಪ್ಪನ ಹೋಲಿಕೆ ಇರುತ್ತದೆ. ಶಿವಣ್ಣ, ರಾಘಣ್ಣ , ನಾವು ಮೂವರನ್ನು ಜನ ಅಪ್ಪಾಜಿಯನ್ನು ಕಾಣುತ್ತಾರೆ.

ನಾನು ಅಪ್ಪನ ರೀತಿ ಎಂದು ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ, ಅವರೇ ಬೇರೇ, ಅವರ ಹಾಗೆ ಮತ್ತೊಬ್ಬರು ಇರಲು ಸಾಧ್ಯವಿಲ್ಲ, ಯಾರನ್ನು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com