ನಟಿ ಅಮಲಾ ಪೌಲ್ ವಿರುದ್ಧ ಕೇಸ್‌ ದಾಖಲಿಸಿ ಎಂದ ಪುದುಚೇರಿ ಗವರ್ನರ್ ಕಿರಣ್‌ ಬೇಡಿ

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್‌ ವಿರುದ್ಧ ಕೂಡಲೇ ತೆರಿಗೆ ವಂಚನೆ ಪ್ರಕರಣ ದಾಖಲಿಸುವಂತೆ ಪುದುಚೇರಿ ಲೆ.ಗವರ್ನರ್ ಕಿರಣ್‌ ಬೇಡಿ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪುದುಚೇರಿ: ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್‌ ವಿರುದ್ಧ ಕೂಡಲೇ ತೆರಿಗೆ ವಂಚನೆ ಪ್ರಕರಣ ದಾಖಲಿಸುವಂತೆ ಪುದುಚೇರಿ ಲೆ.ಗವರ್ನರ್ ಕಿರಣ್‌ ಬೇಡಿ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಟಿ ಅಮಲಾ ಪೌಲ್ ಅವರು ತಾವು ಖರೀದಿಸಿದ್ದ ದುಬಾರಿ ಕಾರಿನ ತೆರಿಗೆ ಉಳಿಸುವ ಸಲುವಾಗಿ ನಕಲಿ ವಿಳಾಸ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್  ಬೇಡಿ ಅವರು ಗರಂ ಆಗಿದ್ದು, ಕೂಡಲೇ ನಟಿ ಅಮಲಾಪೌಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿನ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುದುಚೇರಿ ಲೆ.ಗವರ್ನರ್ ಕಿರಣ್ ಬೇಡಿ ಅವರು, "ನಾವು ಇಂಥಹ ಮೋಸಗಳಿಗೆ ಕೊನೆ ಹಾಡಬೇಕಿದ್ದು, ಪುದುಚೆರಿಗೆ ತೆರಿಗೆ ನಷ್ಟವಾದರೂ, ತಮಿಳುನಾಡಿಗೆ ತೆರಿಗೆ ನಷ್ಟವಾದರೂ, ಅದು ದೇಶದ  ಕಂದಾಯಕ್ಕಾಗುವ ನಷ್ಟವೇ. ಜತೆಗೆ, ಇಂಥಹ ತಂತ್ರಗಳು ನಮ್ಮ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತವೆ. ಈ ಪ್ರಕರಣದ ಕುರಿತು ತಕ್ಷ ಣವೇ ಗಮನ ಹರಿಸಿ, ಇಂಥಹ ಘಟನೆಗಳಿಗೆ ಬ್ರೇಕ್ ಹಾಕಿ'' ಎಂದು ಬೇಡಿ ಸಾರಿಗೆ ಆಯುಕ್ತರಿಗೆ  ನೀಡಿದ ಅಧಿಕೃತ ನಿರ್ದೇಶನದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಕಳೆದ ಅಕ್ಟೋಬರ್ 4ರಂದು ದಕ್ಷಿಣ ಭಾರತದ ಖ್ಯಾತ ನಟಿ ಅಮಲಾಪೌಲ್ ಅವರು, ಸುಮಾರು 1.12 ಕೋಟಿ ರೂ. ಮೊತ್ತದ ಎಸ್‌ ಕ್ಲಾಸ್‌ ಮರ್ಸಿಡೀಸ್‌ ಬೆಂಜ್‌ ಕಾರನ್ನು ಖರೀದಿಸಿದ್ದರು. ಅಮಲಾ ಅವರ ಮನೆ ಇರುವ ಕೇರಳದಲ್ಲಿ  ಈ ಕಾರಿಗೆ 20 ಲಕ್ಷ ರೂ.ಗಳ ವರೆಗೂ ತೆರಿಗೆ ಇದ್ದು, ಪುದುಚೇರಿಯಲ್ಲಿ ಮಾತ್ರ ಇದಕ್ಕೆ 1.12 ಲಕ್ಷ ರೂ. ತೆರಿಗೆ ಇದೆ. ಅಂದರೆ ಸುಮಾರು 20 ಪಟ್ಟು ಕಡಿಮೆ ತೆರಿಗೆ ಇದೆ. ಇದೇ ಕಾರಣಕ್ಕೆ ನಟಿ ಅಮಲಾಪೌಲ್ ಅವರು, ತಮ್ಮ ಕಾರಿನ  ನೋಂದಣಿ ಕಾರ್ಯವನ್ನು ಕೇರಳದಲ್ಲಿ ಮಾಡಿಸದೇ ಪುದುಚೆರಿಯಲ್ಲಿ ಮಾಡಿಸಿದ್ದಾರೆ ಎನ್ನಲಾಗಿದೆ. ಪುದುಚೇರಿಯಲ್ಲಿರುವ ತಮ್ಮ ಸಂಬಂಧಿಯೊಬ್ಬರ ವಿಳಾಸ ನೀಡಿ ನಟಿ ಅಮಲಾಪೌಲ್ ಕಾರಿನ ನೋಂದಣಿ ಮಾಡಿಸಿದ್ದಾರೆ. 
ಇದೀಗ ನಟಿ ಅಮಲಾಪೌಲ್ ಅವರ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಟಿ ವಿರುದ್ಧ ಪುದುಚೇರಿ ಗವರ್ನರ್ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಆ ಮೂಲಕ ನಟಿ ಕಾನೂನು ತೂಗುಗತ್ತಿ ಎದುರಿಸಬೇಕಾದ  ಅನಿವಾರ್ಯತೆಗೆ ಸಿಲುಕಿದ್ದಾರೆ. 
ಕೇವಲ ನಟಿ ಅಮಲಾ ಮಾತ್ರವಲ್ಲದೇ ಮಲಯಾಳಂ ನಟ ಫಹಾದ್‌ ಫಾಸಿಲ್‌ ಅವರೂ ಕೂಡ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ನಟನ ಇ ಕ್ಲಾಸ್‌ ಬೆಂಜ್‌ ಕಾರು ಕೂಡಾ ಪುದುಚೆರಿಯಲ್ಲೇ ನೋಂದಣಿಯಾಗಿರುವುದು  ಬೆಳಕಿಗೆ ಬಂದಿದೆ. ಹೀಗಾಗಿ ನಟ-ನಟಿಯರ ತೆರಿಗೆ ವಂಚನೆ ಬೆಳಕಿಗೆ ಬರುತ್ತಿದ್ದಂತೆಯೇ, ಪುದುಚೆರಿಯ ಕಾಯಂ ನಿವಾಸಿಗಳಿಗೆ ಮಾತ್ರ ಇಲ್ಲಿ ನೋಂದಣಿ ಮಾಡಿಸಲು ಅವಕಾಶ ನೀಡಬೇಕು ಹಾಗೂ ನೋಂದಣಿದಾರರು ನೀಡಿದ  ವಿಳಾಸ ಪರಿಶೀಲಿಸಬೇಕು ಎಂದು ಕಿರಣ್‌ ಬೇಡಿ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com