'ಜಲೀಲ'ನಿಂದ 'ರೆಬೆಲ್ 'ವರೆಗೆ ಮಂಡ್ಯದ ಗಂಡು ಸಾಗಿದ ಹಾದಿ

ಕನ್ನಡ ಚಿತ್ರರಂಗದ ದಂತಕಥೆ ಮತ್ತು ಮಾಜಿ ಕೇಂದ್ರ ಸಚಿವ ಮಳವಳ್ಳಿ ಹುಚ್ಚೇ ಗೌಡ ಅಮರನಾಥ್ ಚಿತ್ರರಂಗ...
ಅಂಬರೀಷ್ (ಸಂಗ್ರಹ ಚಿತ್ರ)
ಅಂಬರೀಷ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರೆಬೆಲ್ ಸ್ಟಾರ್, ಮಂಡ್ಯದ ಗಂಡು, ಕನ್ನಡ ಚಿತ್ರರಂಗದ ಅಣ್ಣ, ಕರ್ಣ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅಂಬರೀಷ್ ಇಂದು ಇಲ್ಲವಾಗಿದ್ದಾರೆ.
1952 ಮೇ 29ರಂದು ಮಂಡ್ಯ ಜೆಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಹುಚ್ಚೇಗೌಡ, ಪದ್ಮಮ್ಮ ದಂಪತಿಗೆ 6ನೇ ಮಗನಾಗಿ  ಜನಿಸಿದ್ದ ಅಂಬರೀಷ್ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಖ್ಯಾತ ಪಿಟೀಲು ವಾದಕ ಟಿ.ಚೌಡಯ್ಯರವರ ಮೊಮ್ಮಗನಾಗಿದ್ದ ಅಂಬರೀಶ್ ಮಂಡ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರು.ನಂತರ ಮೈಸೂರಿನ ಸರಸ್ವತಿಪುರಂನಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು. ಕಾಲೇಜಿನಲ್ಲಿ ಓದುತ್ತಿರುವಾಗಲೇ ಮೋಜು-ಮಸ್ತಿಯಲ್ಲಿ ತೊಡಗಿದ್ದ ಅಂಬರೀಷ್ ಬಹಳ ವಿನೋದ ಸ್ವಭಾವದ ಯುವಕ.

ಅಮರನಾಥ ಹೆಸರು ಅಂಬರೀಷ್ ಅಗಿದ್ದರ ಹಿಂದೆ ಒಂದು ರೋಚಕ ವಿಷಯವಿದೆ. 1970ರ ದಶಕ ಕನ್ನಡ ಚಿತ್ರರಂಗದ ಸುವರ್ಣಯುಗ ಎಂತಲೇ ಕರೆಯಬಹುದು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ 1971ರಲ್ಲಿ ನಾಗರಹಾವು ಎಂಬ ಚಿತ್ರ ನಿರ್ದೇಶಿಸಿದ್ದರು. ಅದರ ನಾಯಕ ನಟ ವಿಷ್ಣುವರ್ಧನ್. ಅದರಲ್ಲೊಂದು ಜಲೀಲ ಎಂಬ ಚಿಕ್ಕ ಪಾತ್ರವಿತ್ತು. ಅದಕ್ಕೆ ನವ ಚಿಗುರು ಮೀಸೆಯ ಉತ್ಸಾಹಿ ಯುವಕನನ್ನು ಪುಟ್ಟಣ್ಣ ಕಣಗಾಲ್ ಹುಡುಕುತ್ತಿದ್ದರು. ಈ ವೇಳೆ ನಿರ್ದೇಶಕರಿಗೆ ಪರಿಚಯವಿದ್ದ ಅಮರನಾಥ್ ನ ಸ್ನೇಹಿತ ಸಂಗ್ರಾಮ್ ಆತನಿಗೆ ಇಷ್ಟವಿಲ್ಲದಿದ್ದರೂ ನನ್ನ ಸ್ನೇಹಿತನೊಬ್ಬ ಇದ್ದಾನೆ ಎಂದು ಹೇಳುತ್ತಾರೆ, ಕರೆದುಕೊಂಡು ಬನ್ನಿ ಎಂದು ಪುಟ್ಟಣ್ಣ ಕಣಗಾಲ್ ಹೇಳುತ್ತಾರೆ, ಸಂಗ್ರಾಮ್ ಬಲವಂತವಾಗಿ ಅಮರನಾಥನನ್ನು ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗೆ ಪಾತ್ರದ ಸ್ಕ್ರೀನ್ ಟೆಸ್ಟ್ ಗೆ ಕರೆದುಕೊಂಡು ಹೋಗುತ್ತಾರೆ.

ಅಮರನಾಥನನ್ನು ನೋಡಿದ ಪುಟ್ಟಣ್ಣ ಕಣಗಾಲ್ ಮೇಕಪ್ ಮಾಡಿಕೊಂಡು ಸ್ಕ್ರೀನ್ ಟೆಸ್ಟ್ ಗೆ ಬರುವಂತೆ ಸೂಚಿಸುತ್ತಾರೆ. ಅಂಜಿಕೆಯಿಂದಲೇ ಮೇಕಪ್ ಹಾಕಿ ಕ್ಯಾಮರಾ ಮುಂದೆ ಬಂದು ನಿಂತ ಅಮರನಾಥ ಜಲೀಲನ ಪಾತ್ರಕ್ಕಾಗಿ ಸಜ್ಜಾಗುತ್ತಾರೆ, ಕಾಲೇಜು ಹುಡುಗಿಯನ್ನು ರೇಗಿಸುವ ಚಿಕ್ಕ ಚೊಕ್ಕ ಪಾತ್ರ. ನಂತರ ಈ ಪಾತ್ರ ನೀಡಿದ ಜನಪ್ರಿಯತೆ, ಡೈಲಾಗ್ ಇಂದಿಗೂ ಜನಮಾನಸದಲ್ಲಿ ಉಳಿದಿರುವುದು ಇತಿಹಾಸ. ಪುಟ್ಟಣ್ಣ ಕಣಗಾಲ್ ಅವರೇ ಅಮರನಾಥನಿಗೆ ಅಂಬರೀಷ್ ಎಂದು ಹೆಸರಿಟ್ಟರು.

ಜಲೀಲ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರದ ಹೊಸ ಟ್ರೆಂಡನ್ನೇ ಅಂಬರೀಷ್ ಹುಟ್ಟುಹಾಕಿದ್ದರು. ಈ ಚಿತ್ರ ಹಿಂದಿ ಭಾಷೆಗೆ ರಿಮೇಕ್ ಆಯಿತು. ಅಲ್ಲಿ ಕೂಡ ಜಲೀಲನ ಪಾತ್ರ ಅಂಬರೀಷ್ ನಿರ್ವಹಿಸಿದ್ದು.

ಅಂಬರೀಷ್ ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ ಅಮರನಾಥ, ಆದರೆ ಅದರಿಂದ ಅಷ್ಟು ಯಶಸ್ಸು ಸಿಗಲಿಲ್ಲ. 1980ರಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ಮಾಣದ ಹಂತ ಚಿತ್ರ ಅವರಿಗೆ ಯಶಸ್ಸು ತಂದುಕೊಟ್ಟಿತು. ಇದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಸಹ ರಿಮೇಕ್ ಆಯಿತು. ಅದರಲ್ಲಿನ ಕನ್ವರ್ ಲಾಲ್ ಪಾತ್ರ, ಕುತ್ತೇ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ ಎಂಬ ಡೈಲಾಗ್ ಈಗಲೂ ಜನರ ಬಾಯಲ್ಲಿ ನಲಿದಾಡುತ್ತಿರುತ್ತದೆ.

ಪುಟ್ಟಣ್ಣ ಕಣಗಾಲ್ ಮತ್ತು ಅಂಬರೀಷ್ ನಡುವಿನ ಆತ್ಮೀಯತೆ ಮುಂದೆ ಗುರು-ಶಿಷ್ಯರ ರೀತಿ ಮುಂದುವರಿಯಿತು. ಈ ನಡುವೆ ನಾಗರಹಾವು ಚಿತ್ರದ ನಂತರ ವಿಷ್ಣುವರ್ಧನ್ ಮತ್ತು ವಯಸ್ಸಿನಲ್ಲಿ ಅವರಿಗಿಂತ ಕಿರಿಯನಾದ ಅಂಬರೀಷ್ ಸ್ನೇಹ ಬೆಳೆಯಿತು.ಕನ್ನಡ ಚಿತ್ರರಂಗದ ಕುಚಿಕು ಗೆಳೆಯರಾಗಿ ಎಲ್ಲರಿಗೂ ಮಾದರಿಯಾದರು.

ಪುಟ್ಟಣ್ಣ ಕಣಗಾಲ್ ಜೊತೆ ಪಡುವಾರಳ್ಳಿ ಪಾಂಡವರು, ಶುಭಮಂಗಳ, ರಂಗನಾಯಕಿ ಸೇರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಸಿದ್ದು ಈ ವರ್ಷ ತೆರೆಕಂಡ ಅಂಬಿ ನಿಂಗೆ ವಯಸ್ಸಾಯ್ತೊ ಅವರ ಕೊನೆಯ ಚಿತ್ರ.

ಅಂಬರೀಶ್ 80ರ ದಶಕದಲ್ಲಿ ಚಿರಯುವಕನ ಪಾತ್ರದಲ್ಲಿ ಹಲವು ಸಿನಿಮಾಗಳಲ್ಲಿ ಮಿಂಚಿದವರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರಾಜಕೀಯ ವಿಡಂಬನೆಯ ಹಂತ ಚಿತ್ರವನ್ನು ಹಿಂದಿ ಮತ್ತು ತಮಿಳಿನಲ್ಲಿ ಅವರೇ ನಿರ್ದೇಶಿಸುತ್ತಾರೆ. ಈ ವಿವಾದಾತ್ಮಕ ಚಿತ್ರ ಭಾರತದಲ್ಲಿ ಮೊದಲ ಬಾರಿಗೆ ರಾಜಕಾರಣಿಗಳು, ಸರ್ಕಾರದ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮುಖವನ್ನು ಅನಾವರಣ ಮಾಡಿತ್ತು. 'ಚಕ್ರವ್ಯೂಹ' ಮತ್ತು 'ನ್ಯೂ ಡೆಲ್ಲಿ' ಸಿನಿಮಾಗಳು ಕೂಡ ಇದೇ ಆಯಾಮದಲ್ಲಿ ಇದ್ದವು.'ರಂಗನಾಯಕಿ', 'ಟೋನಿ',  'ರಾಣಿ ಮಹಾರಾಣಿ', 'ಒಲವಿನ ಉಡುಗೊರೆ', 'ಹೃದಯ ಹಾಡಿತು', 'ಹಾಂಕಾಂಗ್​ನಲ್ಲಿ ಏಜೆಂಟ್​ ಅಮರ್', 'ಮಣ್ಣಿನ ಮಗ' ಮತ್ತು 'ಒಡಹುಟ್ಟಿದವರು' ಹಾಗೂ 'ಮಸಣದ ಹೂವು', 'ಏಳು ಸುತ್ತಿನ ಕೋಟೆ' ಮತ್ತು ಮಲೆಯಾಳಂನ 'ಗಾನಂ'  ಅಂಬರೀಶ್​ ಅವರ ನಟನೆಗೆ ಕನ್ನಡಿ ಹಿಡಿದ ಚಿತ್ರಗಳು. ಚಿತ್ರರಂಗದ ದಂತಕತೆ ಡಾ.ರಾಜ್​ಕುಮಾರ್​ ಅವರೊಂದಿಗೂ ಅಂಬರೀಶ್​ ನಟಿಸಿದ್ದರು.

1991ರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ, ಬಹುಭಾಷಾ ತಾರೆ ಸುಮಲತಾ ಅವರ ಕೈ ಹಿಡಿದರು ಅಂಬರೀಷ್. ಅಲ್ಲಿಂದ ಮುಂದೆ ಇಬ್ಬರೂ ಚಿತ್ರರಂಗದಲ್ಲಿ ಬೆಳೆದರು. 1994ರಲ್ಲಿ ಅಂಬರೀಷ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಕೆಲಸ ಮಾಡಿದ್ದಾರೆ. ಶಾಸಕರಾಗಿ, ಕೇಂದ್ರ, ರಾಜ್ಯ ಸಚಿವರಾಗಿ ಕೂಡ ಸೇವೆ ಸಲ್ಲಿಸಿದರು.

ರಾಜಕೀಯದಲ್ಲಿ ಅಂಬರೀಷ್:
* 1998-99: 12ನೇ ಲೋಕಸಭಾ ಸದಸ್ಯರು.
* 1999-04: 13ನೇ ಲೋಕಸಭಾ ಸದಸ್ಯರು.
* 2004-09: 14ನೇ ಲೋಕಸಭಾ ಸದಸ್ಯರು.
* 2006-08: ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
* 2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
* 2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
* 2013 ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ವಸತಿ ಸಚಿವರು.

ಅಂಬರೀಷ್ ಅವರ ಸಾಧನೆ ಮತ್ತು ಕೆಲಸಗಳನ್ನು ನೋಡಿ ಹಲವು ಸನ್ಮಾನ, ಗೌರವಗಳು ಲಭಿಸಿವೆ. 2013 ರಲ್ಲಿ  ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗೌರವ ಡಾಕ್ಟರೇಟ್  ನೀಡಿ ಗೌರವಿಸಿದೆ.
* ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ಯುತ್ತಮ ನಟ - 1982.
* ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ಯುತ್ತಮ ಸಹಾಯ ನಟ - ಮಸಣದ ಹೂವು(1985-86)
* ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಒಲವಿನ ಉಡುಗೊರೆ.
* ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ - 2005.
* ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ - 2009.
* ನಂದಿ ಪ್ರಶಸ್ತಿ( ಆಂದ್ರಸರ್ಕಾರ) - 2009.
* ಟಿವಿ9 ಸ್ಯಾಂಡಲ್ ವುಡ್ ಸ್ಟಾರ್ ಪ್ರಶಸ್ತಿ - 2012.
* ವಿಷ್ಣುವರ್ದನ್ ಪ್ರಶಸ್ತಿ (ಕರ್ನಾಟಕ ಸರ್ಕಾರ) - 2011.
* ಗೌರವ ಡಾಕ್ಟರೇಟ್ ಕರ್ನಾಟಕ ವಿವಿ) - 2013.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com