ಮಂಡ್ಯದ ಗಂಡು ಅಂಬರೀಶ್ ಕುರಿತು ಪತ್ನಿ ಸುಮಲತಾ ಹೇಳಿದ್ದೇನು?

ಮಂಡ್ಯದ ಗಂಡು, ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಿರನಿದ್ರೆಗೆ ಜಾರಿದ್ದು ಪತ್ನಿ ಸುಮಲತಾ ಅವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ...
ಸುಮಲತಾ
ಸುಮಲತಾ
Updated on: 
ಮಂಡ್ಯದ ಗಂಡು, ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಿರನಿದ್ರೆಗೆ ಜಾರಿದ್ದು ಪತ್ನಿ ಸುಮಲತಾ ಅವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. 
1984ರಲ್ಲಿ ಕನ್ನಡದ ಆಹುತಿ ಚಿತ್ರದಲ್ಲಿ ಅಂಬರೀಶ್ ಜೊತೆ ನಟಿಸಲು ನನಗೆ ಅವಕಾಶ ಸಿಕ್ಕಿತ್ತು. ಅದೇ ಸಮಯದಲ್ಲಿ ನಾನು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದೆ. ಆಹುತಿ ನನ್ನ ಮೊದಲ ಚಿತ್ರವಾಗಿದ್ದರಿಂದ ಅಂಬರೀಶ್ ಅವರು ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ನೋಡಿರಲಿಲ್ಲ. ಶೂಟಿಂಗ್ ಗೆ ಅಂತ ಬೆಂಗಳೂರಿಗೆ ಬಂದಾಗ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ತಂಗುತ್ತಿದ್ದೆ. ಮೊದಲ ಬಾರಿಗೆ ಅಂಬರೀಶ್ ಅವರನ್ನು ನೇರವಾಗಿ ನೋಡಿದ್ದೆ ಆ ಹೋಟೆಲ್ ನಲ್ಲಿ. ಪರಿಚಯ ಇಲ್ಲದೆ ಕಾರಣ ನಾನು ಮಾತನಾಡಿಸಲಿಲ್ಲ. ನಂತರ ಚಿತ್ರದ ಸೆಟ್ ನಲ್ಲಿ ಅವರ ಜೊತೆ ಮಾತನಾಡಲು ಶುರು ಮಾಡಿದೆ. 
ಆಹುತಿ ಚಿತ್ರದ ನಂತರ ಮೂರ್ನಾಲ್ಕು ವರ್ಷಗಳ ಕಾಲ ನಾವು ಯಾವುದೇ ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿಲ್ಲ. ನಾನು ಚೆನ್ನೈನಲ್ಲಿ ಅವರು ಬೆಂಗಳೂರಿನಲ್ಲಿ ಇದ್ದರು. ಆಗ ಮೊಬೈಲ್ ಇರಲಿಲ್ಲ. ಅಂಬಿ ಚೆನ್ನೈಗೆ ಬಂದಾಗ ಫೋನ್ ಮಾಡಿ ಹೇಗಿದ್ದೀರಾ? ಯಾವ ಚಿತ್ರ ಮಾಡುತ್ತೀದ್ದೀರಿ? ಎಂದಷ್ಟೇ ಕೇಳುತ್ತಿದ್ದರು. 
ಅವರದ್ದು ನೇರ ವ್ಯಕ್ತಿತ್ವ. ಯಾವುದನ್ನು ಮುಚ್ಚಿಟ್ಟುಕೊಳ್ಳುತ್ತಿರಲಿಲ್ಲ. ನಾಟಕೀಯವಾಗಿ ಮಾತನಾಡುತ್ತಿರಲಿಲ್ಲ. ಅವರ ಹೃದಯದಲ್ಲಿ ಏನಿರುತ್ತೋ, ಅದು ಕೋಪವೇ ಇರಬಹುದು, ಪ್ರೀತಿಯೇ ಆಗಿರಬಹುದು ಹಾಗೆಯೇ ನೇರವಾಗಿ ಹೇಳುತ್ತಿದ್ದರು. ಅದು ನನಗೆ ಇಷ್ಟವಾಗುತ್ತಾ ಹೋಯಿತು. ನನಗೇ ಗೊತ್ತಿಲ್ಲದಂತೆ ನನ್ನನ್ನು ಆವರಿಸಿಕೊಂಡರು. ಇಂಥೋರು ಚಿತ್ರರಂಗದಲ್ಲಿ ಸಿಗುವುದು ಅಪರೂಪ ಅನಿಸೋಕೆ ಶುರುವಾಯಿತು. 
ಅವರ ವಿಚಿತ್ರ ನಡುವಳಿಕೆಯೇ ನನಗೆ ವಿಪರೀತ ಇಷ್ಟವಾಗುತ್ತಿತ್ತು. ಇಬ್ಬರೂ ಆರೇಳು ಸಿನಿಮಾ ಒಟ್ಟಿಗೆ ಮಾಡಿದೆವು. ನ್ಯೂಡೆಲ್ಲಿ ಸಿನಿಮಾ ಶೂಟಿಂಗ್ ಮುಗಿದ ನಂತರ ಸ್ನೇಹವು ಪ್ರೇಮಕ್ಕೆ ತಿರುಗಿತ್ತು. ಸಡನ್ನಾಗಿ ಮದುವೆ ಆಗೋದು ಬೇಡ ಅಂತ ಇಬ್ಬರೂ ಮಾತಾಡಿಕೊಂಡೆವು, ಆದರೆ ಅಂಬರೀಶ್ ಮನೆಯಲ್ಲಿ ಮದುವೆ ವಿಷಯ ಪ್ರಸ್ತಾಪ ಆಯಿತು. ಅವರ ತಾಯಿಯ ಕೊನೆ ಆಸೆಯಂತೆ ಮದುವೆಯಾಗೊಕೆ ಅಂಬಿ ನಿರ್ಧರಿಸಿದ್ದು ನನ್ನ ಅವರ ಮದುವೆ 1991ರಲ್ಲಿ ನಡೆಯಿತು. 
ನಾವಿಬ್ಬರು 27 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದೇವು. ವರ್ಷಗಳ ಹೇಗೆ ಉರುಳಿದವು ಅಂತಾ ಗೊತ್ತಾಗುತ್ತಿಲ್ಲ. ಅಂತೂ ಅವರ ಕೋಪತಾಪಗಳ ನಡುವೆ ನನ್ನ ಸಂಸಾರ ಸುಖವಾಗಿತ್ತು ಅಂತ ಅಷ್ಟೇ ಹೇಳುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com