ಏಳು ಬೇರೆಬೇರೆ ಸ್ಥಳಗಳಲ್ಲಿ 'ಕಿಸ್' ಚಿತ್ರದ ಹಾಡಿನ ಶೂಟಿಂಗ್
ತಮ್ಮ ಮುಂಬರುವ ಕಿಸ್ ಚಿತ್ರದ ಶೂಟಿಂಗ್ ಮುಗಿಸುವ ತಯಾರಿಯಲ್ಲಿದ್ದಾರೆ ನಿರ್ದೇಶಕ ಎ ಪಿ ಅರ್ಜುನ್. ಹಾಡೊಂದರ ಚಿತ್ರೀಕರಣ ಬಾಕಿ ಇದ್ದು ಚಿತ್ರದ ನಾಯಕ ನಾಯಕಿಯರಾದ ವಿರಾಟ್ ಮತ್ತು ಶ್ರೀಲೀಲಾ ಈ ಹಾಡಿನ ಚಿತ್ರೀಕರಣಕ್ಕಾಗಿ ದೇಶದ ಏಳು ಭಾಗಗಳಿಗೆ ತೆರಳಲಿದ್ದಾರೆ.
ನೀನೆ ಮೊದಲು ನೀನೆ ಕೊನೆ ಬೇರೆ ಯಾರು ಬೇಡ ನಂಗೆ ಎಂಬ ಹಾಡಿನ ಸಾಲು ಪ್ರಾರಂಭವಾಗುತ್ತಿದ್ದು ಅದಕ್ಕೆ ಸಾಹಿತ್ಯವನ್ನು ನಿರ್ದೇಶಕರೇ ಬರೆದಿದ್ದಾರೆ. ಆದಿ ಹರಿಕೃಷ್ಣ ಅವರು ಸಂಗೀತ ನಿರ್ದೇಶಿಸಿದ್ದು ಇವರು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಪುತ್ರ. ಇಮ್ರಾನ್ ಸರ್ದಾರಿಯಾ ಅವರ ಕೊರಿಯೊಗ್ರಫಿ ಹಾಡಿಗಿದೆ.
ಜೋಧ್ ಪುರದಿಂದ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಿರ್ದೇಶಕ ಎ ಪಿ ಅರ್ಜುನ್, ಇದು ಯುವಜನತೆಗೆ ಹತ್ತಿರವಾದ ಸಿನಿಮಾವಾಗಿದೆ. ಸಂಬಂಧಗಳ ಕುರಿತು ಹಾಡಿದೆ. ಅದರ ಶೂಟಿಂಗ್ ಗಾಗಿ ಏಳು ಸ್ಥಳಗಳಿಗೆ ಹೋಗಲಿದ್ದೇವೆ. ನೀರು ಮತ್ತು ಹಸಿರಿನಿಂದ ಸಮೃದ್ಧವಾಗಿರುವ ಪ್ರದೇಶವನ್ನು ಈ ಹಾಡಿನ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದೇವೆ. ಜೋಧಪುರದ ಖಿಮ್ಸಾರ್, ಕಿಶಂಗರ್, ಆಗ್ರಾ, ಲೇಹ್ ಲಡಾಕ್, ಕೇರಳ, ಕುದುರೆಮುಖ ಮತ್ತು ಶಿವಮೊಗ್ಗದ ಜೋಗ್ ಫಾಲ್ಸ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.
ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದೆ. ರಾಷ್ಟ್ರಕೂಟ ಪಿಕ್ಚರ್ಸ್ ನಲ್ಲಿ ರವಿ ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಜೆ ಶೆಟ್ಟಿ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ