ಪಂಚ ಭಾಷೆಗಳಲ್ಲಿ 'ಗಿರ್ಮಿಟ್' ಈ ವಾರ ತೆರೆಗೆ - ರವಿ ಬಸ್ರೂರು
ಬೆಂಗಳೂರು: ಸಂಗೀತ ಸಂಯೋಜಕ ಹಾಗೂ ಚಿತ್ರ ನಿರ್ದೇಶಕ ರವಿ ಬಸ್ರೂರು ಅವರ ಮುಂದಿನ ಗಿರ್ಮಿಟ್ ಚಿತ್ರದಲ್ಲಿನ ಮಕ್ಕಳು ಯುವಕರಂತೆ ಮಾತನಾಡಿದ್ದು, ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.
ಕಮರ್ಷಿಯಲ್ ಹಾಗೂ ಮನೋರಂಜನಾತ್ಮಕ ಚಿತ್ರದಲ್ಲಿ 280 ಮಕ್ಕಳು ನಟಿಸಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಇಂಗ್ಲೀಷ್ ಭಾಷೆಯಲ್ಲೂ ಡಬ್ಬಿಂಗ್ ಮಾಡಿ ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಯೋಚಿಸಿದೆ. ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋನಲ್ಲಿ ಮಕ್ಕಳಲ್ಲಿನ ಅದ್ಬುತ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾಗಿ ಅವರು ತಿಳಿಸಿದ್ದಾರೆ.
ಗಿರ್ಮಿಟ್ ಕುಟುಂಬ ಎಂಟರ್ ಟೈನರ್ ಚಿತ್ರವಾಗಿದ್ದು, ಇದರಲ್ಲಿ ಪ್ರೀತಿ ಹಾಗೂ ಹಾಸ್ಯವಿದೆ. ಇದು ರವಿ ಬಸ್ರೂರು ಅವರ ನಾಲ್ಕನೇ ಸಿನಿಮಾವಾಗಿದೆ. ತುಳು ಸಿನಿಮಾ ಮೂಲಕ ನಿರ್ದೇಶಕ ವೃತ್ತಿ ಆರಂಭಿಸಿದ ಅವರ ಮೊದಲ ಕನ್ನಡ ಸಿನಿಮಾ ಕಟಕ.
98 ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದರೂ ಕೆಜಿಎಫ್ ಸಾಕಷ್ಟು ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ. ಎನ್ ಎಸ್ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರವನ್ನು ಕಾರ್ತಿಕ್ ಗೌಡ ವಿತರಿಸಿದ್ದು, ಈ ವಾರ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಯಶ್, ರಾಧಿಕಾ ಪಂಡಿತ್, ಸುಧಾ ಬೆಳವಾಡಿ, ರಂಗಾಯಣ ರಘು , ಅಚ್ಯುತ್ ಕುಮಾರ್, ತಾರಾ, ಪೆಟ್ರೋಲ್ ಪ್ರಸನ್ನ, ಸಾಧು ಕೋಕಿಲ ಮತ್ತಿತರರ ಧ್ವನಿಯನ್ನು ಪ್ರೇಕ್ಷಕರು ಕೇಳಬಹುದಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡೊಂದನ್ನು ಹಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.