'ಫ್ಯಾಂಟಮ್' ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ ಅಭಿನಯ
ಬೆಂಗಳೂರು: ಕಿಚ್ಚ ಸುದೀಪ್ ಅವರ ಮುಂದಿನ ಫ್ಯಾಂಟಮ್ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ಹಿರೋ ನಿರೂಪ್ ಭಂಡಾರಿ ಅಭಿನಯಿಸಲಿದ್ದಾರೆ.
ಮೂರು ಚಿತ್ರಗಳಲ್ಲಿ ಅಭಿನಯಿಸಿರುವ ನಿರೂಪ್ ಭಂಡಾರಿ ಇದೀಗ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಜೊತೆಗೆ ಅಭಿನಯಿಸುವುದು ಪಕ್ಕಾ ಆಗಿದೆ.
ಮೊದಲಿಗೆ ಸುದೀಪ್ ಸಂಬಂಧಿ ಸಂಚಿತ್ ಸಂಜೀವ್ ಅವರನ್ನು ಈ ಚಿತ್ರಕ್ಕೆ ಕರೆತರಲು ಚಿತ್ರ ತಂಡ ಯೋಚಿಸಿತ್ತು. ಆದರೆ, ಕೆಲ ಸುತ್ತಿನ ಚರ್ಚೆಯ ಬಳಿಕ ನಿರೂಪ್ ಭಂಡಾರಿ ಅವರನ್ನು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಈ ಮಧ್ಯೆ ಸಂಚಿತ್ ಶೀಘ್ರದಲ್ಲಿಯೇ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ನಿರೂಪ್ ಭಂಡಾರಿ ಬಿಗ್ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳುವುದರ ಜೊತೆಗೆ ಅವರ ಸಹೋದರ ಅನೂಪ್ ಭಂಡಾರಿ ಅವರೊಂದಿಗೆ ಮೂರನೇ ಬಾರಿಗೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ.
ರಾಜರತ್ನ ನಿರ್ದೇಶನದ ರಂಗಿತರಂಗ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿರುವ ನಿರೂಪ್ ಭಂಡಾರಿ, ವಿ. ಪ್ರಿಯಾ ನಿರ್ದೇಶನದ ಆದಿ ಲಕ್ಷ್ಮೀ ಪುರಾಣದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಫ್ಯಾಂಟಮ್ ಅವರ ಮೂರನೇ ಸಿನಿಮಾವಾಗಿದೆ.
ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಶೂಟಿಂಗ್ ಮುಕ್ತಾಯದ ನಂತರ 2020ರ ಆರಂಭದಲ್ಲಿ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆ ಇದೆ. ಸುದೀಪ್ ಅವರ ದಬಾಂಗ್ -3 ಡಿಸೆಂಬರ್ 20 ರಂದು ತೆರೆಗೆ ಅಪ್ಪಳಿಸಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ