ಸಲ್ಮಾನ್ ಖಾನ್ ಗೆ ಮತ್ತದೇ ಪ್ರಶ್ನೆ, 'ನಿಮ್ಮ ಮದುವೆ ಯಾವಾಗ' ಅದಕ್ಕೆ ಸೂಪರ್ ಸ್ಟಾರ್ ಹೇಳಿದ್ದೇನು?

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರ ಸರಣಿಯ ಬಹುನಿರೀಕ್ಷಿತ ದಬಾಂಗ್ 3 ಚಿತ್ರ ಇದೇ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಚಾರಕ್ಕೆಂದು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. 
ಬೆಂಗಳೂರಿನಲ್ಲಿ ಚಿತ್ರದ ಪ್ರಚಾರ ಮಾಡಿದ ದಬಾಂಗ್ 3 ಚಿತ್ರತಂಡ
ಬೆಂಗಳೂರಿನಲ್ಲಿ ಚಿತ್ರದ ಪ್ರಚಾರ ಮಾಡಿದ ದಬಾಂಗ್ 3 ಚಿತ್ರತಂಡ

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರ ಸರಣಿಯ ಬಹುನಿರೀಕ್ಷಿತ ದಬಾಂಗ್ 3 ಚಿತ್ರ ಇದೇ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಚಾರಕ್ಕೆಂದು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.


ಈ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡಿದ್ದು ಈ ಹಿನ್ನಲೆಯಲ್ಲಿ ಚಿತ್ರದ ಪ್ರಚಾರತಂಡ ವಿಶೇಷವಾಗಿ ಅವರನ್ನೇ ಕೇಂದ್ರ ಭಾಗವಾಗಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಿತ್ತು.


ಚಿತ್ರದ ನಿರ್ದೇಶಕ ಪ್ರಭುದೇವ ಮತ್ತು ನಾಯಕಿಯರಾದ ಸೋನಾಕ್ಷಿ ಸಿನ್ಹಾ ಮತ್ತು ಸಾಯಿ ಮಂಜ್ರೇಕರ್ ಸಹ ಉಪಸ್ಥಿತರಿದ್ದರು.ಸಲ್ಮಾನ್ ಖಾನ್ ಮತ್ತು ಅವರ ಸೋದರ ಅರ್ಬಾಜ್ ಖಾನ್, ನಿಖಿಲ್ ದ್ವಿವೇದಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದಬಾಂಗ್ 3 ಕೇವಲ ಹಿಂದಿಯಲ್ಲಿ ಮಾತ್ರವಲ್ಲದೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಹ ಬಿಡುಗಡೆಯಾಗುತ್ತಿದ್ದು, ಸ್ವತಃ ಸಲ್ಮಾನ್ ಖಾನ್ ಅವರೇ ಕನ್ನಡ ಭಾಷೆಯಲ್ಲಿ ಡಬ್ ಮಾಡಿರುವುದು ವಿಶೇಷ, ಹೀಗಾಗಿ ಅವರು ಕನ್ನಡದಲ್ಲಿ ಹೇಗೆ ಮಾತನಾಡಿದ್ದಾರೆ ಎಂದು ಕುತೂಹಲದಿಂದ ಒಂದಷ್ಟು ಚಿತ್ರಪ್ರೇಮಿಗಳು ಚಿತ್ರಮಂದಿರಕ್ಕೆ ಬಂದರೆ ಅಚ್ಚರಿಯಿಲ್ಲ.


ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಹೇಳಿದ್ದೇನು?: ಕಿಚ್ಚ ಸುದೀಪ್ ಇದ್ದಾರೆ ಎಂದು ಕನ್ನಡಕ್ಕೆ ಚಿತ್ರವನ್ನು ಡಬ್ ಮಾಡಲಾಗಿದೆಯೇ ಎಂದು ಕೇಳಿದಾಗ ಇಲ್ಲ ನಾವು ಎಲ್ಲಾ ಭಾಷೆಗಳಲ್ಲಿ ಇದನ್ನು ತರಲು ಆರಂಭದಲ್ಲಿಯೇ ಆಲೋಚಿಸಿದ್ದೆವು, ಇದರಲ್ಲಿ ಸಾಕಷ್ಟು ಹೀರೋ, ಹೀರೋಯಿನ್ಗಳು ಇದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪ್ರಭುದೇವ ಅವರ ನಿರ್ದೇಶನವಿರುವುದರಿಂದ ದಕ್ಷಿಣದ ಭಾಷೆಗಳಿಗೂ ತರಲು ಯೋಚಿಸಿದೆವು. ಕನ್ನಡದಲ್ಲಿ ಇದಕ್ಕೆ ಕಿಚ್ಚ ಸುದೀಪ್ ಅವರ ಸಾಥ್ ಸಿಕ್ಕಿದ್ದು ಹೆಚ್ಚುಅನುಕೂಲವಾಯಿತು, ನನ್ನ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು, ಪ್ರೇಕ್ಷಕರ ಸ್ವಾಗತ ಹೇಗೆ ಸಿಗುತ್ತದೆ ಎಂಬ ಕುತೂಹಲವಿದೆ ಎಂದರು.


ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡಿದ್ದು ಬಹಳಷ್ಟು ಖುಷಿ ನೀಡಿತು, ಅವರು ನನ್ನ ಕಿರಿಯ ಸೋದರ, ಕನ್ನಡ ಭಾಷೆಯಲ್ಲಿ ಡಬ್ ಮಾಡಿದ್ದು ಬಹಳ ಉತ್ತಮ ಅನುಭವ ನೀಡಿತು, ಇನ್ನು ಮುಂದೆಯೂ ಅವರ ಜೊತೆ ಕೆಲಸ ಮಾಡಲು, ಒಡನಾಟ ಮುಂದುವರಿಸಲು ಇಚ್ಛಿಸುತ್ತೇನೆ, ಅವರಲ್ಲಿ ಯಾವುದೇ ಕೆಟ್ಟ ಗುಣಗಳು ಇಲ್ಲದಿರುವುದು ಅವರಲ್ಲಿ ಕಂಡ ಒಳ್ಳೆಯ ಗುಣ ಎಂದರು, ಕನ್ನಡದಲ್ಲಿ ಒಂದು ಡೈಲಾಗ್ ಹೇಳುತ್ತೀರಾ ಎಂದು ಕೇಳಿದಾಗ, ಸುದೀಪ್ ಹೇಳಿಕೊಟ್ಟಂತೆ ಟೈಮ್ ನಂದು, ತಾರೀಖು ನಂದು ಎಂದರು.


ಚಿತ್ರದಲ್ಲಿ ಇಬ್ಬರು ಹೀರೋಯಿನ್ ಗಳ ಜೊತೆ ಕೆಲಸ ಮಾಡಿದ್ದು ಬಹಳ ಖುಷಿ ಕೊಟ್ಟಿತು ಎಂದರು. ಎಂದಿನಂತೆ ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಪತ್ರಕರ್ತರೊಬ್ಬರಿಂದ ಪ್ರಶ್ನೆ ಬಂತು, ಅದಕ್ಕೆ ಒಂದು ಕ್ಷಣ ಸುಮ್ಮನಾಗಿ ಯೋಚಿಸಿ ಸಮಯ ಬಂದಾಗ ಆಗುತ್ತೇನೆ ಎಂದರು.ನಿಮ್ಮ ಫಿಟ್ ನೆಸ್ ಸೀಕ್ರೆಟ್ ಏನು ಎಂದು ಕೇಳಿದಾಗ ನಿಮ್ಮ ಫಿಟ್ ನೆಸ್ ಸೀಕ್ರೆಟ್ ಅಲ್ಲದಿರುವುದು ನನ್ನ ಫಿಟ್ ನೆಸ್ ಸೀಕ್ರೆಟ್ ಎಂದರು, 


ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ತೆರೆಯ ಹಿಂದೆ ವೈಯಕ್ತಿಕವಾಗಿ ನಟರ ಮಧ್ಯೆ ಉತ್ತಮ ಬಾಂಧವ್ಯವಿದ್ದಾಗ ಅದರಿಂದ ನಟನೆಗೆ ಸಹ ಅನುಕೂಲವಾಗುತ್ತದೆ. ಅದು ದಬಾಂಗ್ 3ಯಲ್ಲಿ ಅನುಭವಕ್ಕೆ ಬಂತು. ಸಲ್ಮಾನ್ ಖಾನ್ ಸೆಟ್ ನಲ್ಲಿರುವಾಗ ಸೂಪರ್ ಸ್ಟಾರ್ ಒಬ್ಬರು ಇದ್ದಾರೆ ಅನಿಸಲಿಲ್ಲ, ಒಬ್ಬ ಸ್ನೇಹಿತ, ಒಬ್ಬ ಸೋದರ ಇದ್ದಾರೆ ಅನಿಸುತ್ತಿತ್ತು. ಇದರಿಂದ ನಟನೆ ಸುಲಭವಾಗಿ ಸಾಗಿತು. ಅಂತಹ ಗುಣ ಸಲ್ಮಾನ್ ಖಾನ್ ಅವರದ್ದು ಎಂದು ಹೊಗಳಿದರು.


ಬೆಂಗಳೂರಿಗೆ ಬಂದು ಚಿತ್ರ ಪ್ರಚಾರ ಮಾಡಬೇಕೆಂಬುದು ಸಲ್ಮಾನ್ ಖಾನ್ ಅವರ ಆಸೆಯಾಗಿತ್ತು. ನಾವೆಲ್ಲರೂ ಆಸೆಪಡುವುದು ಕನ್ನಡ ಭಾಷೆ ಬೆಳೆಯಬೇಕೆಂದು. ಬೇರೆ ಕಲಾವಿದರು ಬೇರೆ ರಾಜ್ಯದಿಂದ ಬಂದು ನಮ್ಮ ಭಾಷೆ ಮಾತನಾಡುವುದಕ್ಕೆ, ನಮ್ಮ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡಲು ಆಸೆ ಪಡುತ್ತಿದ್ದಾರೆ ಎಂದರೆ ಅದು ಕನ್ನಡ ಭಾಷೆಯ ಬೆಳವಣಿಗೆ, ಕನ್ನಡ ಬೆಳೆಯಲು ಬೇರೆ ಭಾಷೆಯವರು ಕೂಡ ನಮ್ಮ ಭಾಷೆ ಮಾತನಾಡಬೇಕು. ಅವರು ಕನ್ನಡ ಮಾತನಾಡಿರದಿದ್ದರೆ ಇಂದು ಈ ವೇದಿಕೆ ಬರುತ್ತಿರಲಿಲ್ಲ. ಅವರು ಕನ್ನಡ ಮಾತನಾಡಲು ಬಯಸಿದರು. ಹೀಗಾಗಿ  ದಬಾಂಗ್ 3 ಹಿಂದಿ ಅಲ್ಲ, ಒಂದು ಕನ್ನಡ ಚಿತ್ರ ಎಂದರು. 


ದಕ್ಷಿಣ ಭಾರತದ ಚಿತ್ರಗಳನ್ನು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಿ ಎಂದು ಕೇಳಿದಾಗ ಅವರು ಕೂಡ ಮುಕ್ತವಾಗಿ ನಮ್ಮ ಭಾಷೆಯನ್ನು ಸ್ವಾಗತ ಮಾಡಿಯೇ ಕನ್ನಡ ಚಿತ್ರಗಳು ಬಿಡುಗಡೆಯಾಗಿರುವುದು. ಈ ನಿಟ್ಟಿನಲ್ಲಿ ಭಾಷೆ ಬೆಳೆಯುತ್ತಿದೆ. ಕನ್ನಡ ಭಾಷೆಯ ಚಿತ್ರಗಳು ಬೇರೆ ಬೇರೆ ಭಾಷೆಗಳಿಗೆ ಪರಿಚಯವಾಗುತ್ತಿದೆ. ದೊಡ್ಡ ಬಜೆಟ್ ನಲ್ಲಿ ಬಿಡುಗಡೆಯಾಗುತ್ತಿದೆ. ಅವರು ನಮ್ಮ ಚಿತ್ರವನ್ನು ಸ್ವಾಗತಿಸುತ್ತಿರುವಾಗ ಬೇರೆ ಭಾಷೆಯ ಚಿತ್ರಗಳನ್ನು ಸಹ ಅಷ್ಟೇ ಪ್ರೀತಿಯಿಂದ ಸ್ವಾಗತಿಸುವುದು ನಮ್ಮ ಕರ್ತವ್ಯವಾಗುತ್ತದೆ ಎಂದು ಸುದೀಪ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com