

ಬೆಂಗಳೂರು: ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದಿರುವ ಪಾರ್ಟಿ ಫ್ರೀಕ್ ಹಾಡು ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ.
ಈ ಹಾಡಿಗೆ ಸಾಹಿತ್ಯ, ಸಂಗೀತದ ಜತೆ ಧ್ವನಿಯನ್ನೂ ನೀಡಿರುವ ಚಂದನ್ ಶೆಟ್ಟಿ, ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್‌ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ. 3 ದಿನಗಳ ಕಾಲ ಶೆರ್ಟನ್ ಹೊಟೇಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇದರಿಂದ ನಮ್ಮ ಬೆಳವಣಿಗೆ ಜತೆಗೆ ಇಂಡಸ್ಟ್ರಿಯ ಬೆಳವಣಿಗೆಗೂ ಸಹಕಾರಿ. ಈ ಥರದ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು ಎಂದಿದ್ದಾರೆ.
ಈ ಹಾಡಿಗೆ ಬಂಡವಾಳ ಹೂಡಿರುವ ಚೈತನ್ಯ ಲಕಂಸಾನಿ ಮಾತನಾಡಿ, ತುಂಬ ಕಿರು ಅವಧಿಯಲ್ಲಿ ಈ ಹಾಡನ್ನು ಸೃಷ್ಟಿ ಮಾಡಿದ್ದೇವೆ. ನಮ್ಮ ತಾಂತ್ರಿಕ ತಂಡಕ್ಕೆ ಧನ್ಯವಾದ. ಈ ಆಡಿಯೋ ಸಂಸ್ಥೆ ತೆರೆಯಲು ಮೂಲ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಸಲುವಾಗಿ. ಯಾರಿಗೆ ಸಂಗೀತ ಮತ್ತು ಸಿನಿಮಾ ಆಸಕ್ತಿ ಇದೆಯೋ ಅವರಿಗೆ ನಮ್ಮ ಸಂಸ್ಥೆಯಿಂದ ಸ್ವಾಗತ ಎಂದರು.
ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.