ಬೆಂಗಳೂರು ಚಿತ್ರೋತ್ಸವ
ಬೆಂಗಳೂರು ಚಿತ್ರೋತ್ಸವ

ಬೆಂಗಳೂರು ಚಿತ್ರೋತ್ಸವ: ಸಿನೆಪ್ರೇಮಿಗಳ ಉತ್ಸಾಹ; ಹಬ್ಬದ ವಾತಾವರಣ

ನಗರದ ಆಯ್ದ ಚಿತ್ರಮಂದಿರಗಳಲ್ಲಿ ಸಿನೆಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಿನೆಪ್ರೇಮಿಗಳ ಸಡಗರವೇ ಇದಕ್ಕೆ ಕಾರಣವಾಗಿದೆ. ರಾಜ್ಯದ, ರಾಷ್ಟ್ರದ, ವಿದೇಶಗಳಿಂದ ಬಂದಿರುವ ಪ್ರತಿನಿಧಿಗಳಿಂದ ವಿವಿಧ ಭಾಷೆಗಳ ಕಲರವ ಕೇಳುತ್ತಿದೆ.

ಬೆಂಗಳೂರು: ನಗರದ ಆಯ್ದ ಚಿತ್ರಮಂದಿರಗಳಲ್ಲಿ ಸಿನೆಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಿನೆಪ್ರೇಮಿಗಳ ಸಡಗರವೇ ಇದಕ್ಕೆ ಕಾರಣವಾಗಿದೆ. ರಾಜ್ಯದ, ರಾಷ್ಟ್ರದ, ವಿದೇಶಗಳಿಂದ ಬಂದಿರುವ ಪ್ರತಿನಿಧಿಗಳಿಂದ ವಿವಿಧ ಭಾಷೆಗಳ ಕಲರವ ಕೇಳುತ್ತಿದೆ.

ಬೆಂಗಳೂರು ಚಿತ್ರೋತ್ಸವದಲ್ಲಿ ಭೇಟಿಯಾದ ದೂರದೂರಿನ ಸಿನೆ ಸ್ನೇಹಿತರ ನಡುವೆ ಯಾವ ಸಿನೆಮಾ ನೋಡಬೇಕು, ಯಾವ ಸಿನೆಮಾ ಉತ್ತಮ ಮತ್ತು ಅತ್ಯುತ್ತಮ ಎಂಬ ಚರ್ಚೆ ಸಾಗಿದೆ. ಇನ್ನೂ ಸಾಕಷ್ಟು ಜನ ಬೇರೆಬೇರೆ ದೇಶಗಳ ಸಿನೆಮಾ ನೋಡೋಣ ಎಂಬ ಆಲೋಚನೆ.  ಇನ್ನೂ ಕೆಲವರದು ಯಾವ ಸ್ಕ್ರೀನ್ ಮುಂದೆ ಹೆಚ್ಚು ಜನ ಇರುತ್ತಾರೋ ಆ ಸಿನೆಮಾ ಚೆನ್ನಾಗಿರಬಹುದೆಂಬ ಅಂದಾಜು. ಮತ್ತೆ ಕೆಲವರು ಯಾವ ಸಿನೆಮಾ ನೋಡಬೇಕು ಎಂದು ಹೋಮ್ ವರ್ಕ್ ಮಾಡಿಕೊಂಡು ಬಂದಿರುವುದು ಕಂಡುಬಂದಿದೆ.

ನಗರದ ಫಿಲ್ಮ್ ಅಧ್ಯಯನ ಸಂಸ್ಥೆಯೊಂದರ ವಿದ್ಯಾರ್ಥಿ ಸುಬೀನ್  “ಚಿತ್ರೋತ್ಸವಕ್ಕೆ ಬಂದಿರುವ ಸಿನೆಮಾಗಳಲ್ಲಿ ಯಾವ ಸಿನೆಮಾಗಳನ್ನು ನೋಡಬೇಕು ಎಂದು ಚರ್ಚೆ ಮಾಡಿಕೊಂಡೆ ಬಂದಿದ್ದೇವೆ. ಅಧ್ಯಾಪಕರು ಸಹ ಮಾರ್ಗದರ್ಶನ ಮಾಡಿದ್ದಾರೆ ಎಂದರು. “ಇಂದಿನ ಕನ್ನಡ ಪತ್ರಿಕೆಯಲ್ಲಿ ಇಂದು ಪ್ರದರ್ಶನವಾಗುತ್ತಿರುವ ಸಿನೆಮಾಗಳಲ್ಲಿ ಯಾವ ಸಿನೆಮಾ ಅತ್ಯುತ್ತಮ ಎಂಬ ಸಲಹೆ ನೀಡಿದ್ದು ತುಂಬ ಅನುಕೂಲವಾಯಿತು. ಪ್ರತಿದಿನವೂ ಇಂಥ ಸಲಹೆ ಬಂದರೆ ಅನುಕೂಲ “ ಎಂದು ರಾಷ್ಟ್ರೀಕೃತ ಬ್ಯಾಂಕ್ ಒಂದರ ನಿವೃತ್ತ ಉದ್ಯೋಗಿ ಲಲಿತಾ ಹೇಳಿದರು.

ಸಿನೆಮಾ ಸಡಗರದ ನಡುವೆ ಪಾಸ್ ವಿತರಣೆಗಾಗಿ ತಾಸುಗಟ್ಟಲೆ ನಿಂತು ಕಾಯಬೇಕಾದ ಸ್ಥಿತಿಗೆ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿದರು. ಇದರಿಂದ ಬೆಳಗ್ಗೆ ಪ್ರದರ್ಶನವಾದ ಸಿನೆಮಾಗಳನ್ನು ನೋಡುವುದರಿಂದಲೂ ವಂಚಿತರಾಗಬೇಕಾಯಿತು. ಕೆಲವು ಹಿರಿಯರು ಹೆಚ್ಚು ಹೊತ್ತು ನಿಲ್ಲಲೂ ಆಗದೇ ಸರದಿಯಿಂದ ಹಿಂದೆ ಬಂದು ಸುಸ್ತಾಗಿ ಕುಳಿತುಕೊಳ್ಳುತ್ತಿದ್ದರು. ಪಾಸ್ ವಿತರಣೆಯನ್ನು ಇನ್ನೂ ವ್ಯವಸ್ಥಿತವಾಗಿ ಮಾಡಿದ್ದರೆ ವಿಳಂಬ ತಪ್ಪಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ತಾಂತ್ರಿಕ ಕಾರಣಗಳಿಂದ ಇಂದು ಪಾಸ್ ವಿತರಣೆಯಲ್ಲಿ ವಿಳಂಬ ಆಗಿದೆ. ಮತ್ತೆ ಇಂದು ಮರುಕಳಿಸದಂತೆ ವ್ಯವಸ್ಥೆ ಮಾಡುತ್ತೇವೆ ಎಂದು ಪ್ರತಿನಿಧಿಗಳಿಗೆ ಆಗಿರುವ ಅನಾನುಕೂಲದ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಿಷಾದ ವ್ಯಕ್ತಪಡಿಸಿದರು. 

ಸುದ್ದಿಗಾರರ ಜೊತೆ ಮಾತನಾಡಿದ ಸುನೀಲ್ ಪುರಾಣಿಕ್ “ಕೇವಲ 48 ದಿನದಿಂದ ಚಿತ್ರೋತ್ಸವ ಸಿದ್ಧತೆ ಆರಂಭವಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಯಾವ ತೊಂದರೆಗಳೂ ಬಾರದಂತೆ ಶಕ್ತಿಮೀರಿ ಶ್ರಮಿಸಿದ್ದೇವೆ. ಇನ್ನು ಮುಂದೆ ಬಹು ಮುಂಚಿತವಾಗಿ ಚಿತ್ರೋತ್ಸವ ಸಿದ್ಧತೆ ಆರಂಭಿಸುತ್ತೇವೆ. ಇದಕ್ಕಾಗಿ ಅಗತ್ಯವಾದ ಎಲ್ಲ ಏರ್ಪಾಡುಗಳನ್ನು ಮಾಡುತ್ತೇವೆ ಎಂದು ವಿವರಿಸಿದರು. ಒರಾಯನ್ ಮಾಲ್ ಪಿ.ವಿ.ಆರ್. ಸಿನೆಮಾ, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ರಾಜ್ ಚಿತ್ರಮಂದಿರ, ಬನಶಂಕರಿಯಲ್ಲಿರುವ ಸುಚಿತ್ರಾ ಸಿನೆಮಾ ಸೊಸೈಟಿ, ನವರಂಗ್ ಚಿತ್ರಮಂದಿರಗಳಲ್ಲಿ 60 ದೇಶಗಳಿಂದ 220 ಸಿನೆಮಾಗಳು ಮಾರ್ಚ್ 3 ರವರೆಗೆ ಪ್ರದರ್ಶನಗೊಳ್ಳಲಿವೆ. ಮಾರ್ಚ್ 4 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಶಸ್ತಿ ಪ್ರದಾನ ನಡೆಯಲಿದೆ.

ವರದಿ: ಕುಮಾರ ರೈತ

Related Stories

No stories found.

Advertisement

X
Kannada Prabha
www.kannadaprabha.com