
ಬೆಂಗಳೂರು: ಪ್ರೀಮಿಯರ್ ಪದ್ಮಿನಿ ಖ್ಯಾತಿಯ ನಟ ಪ್ರಮೋದ್ ಅಭಿನಯದ ‘ಇಂಗ್ಲಿಷ್ ಮಂಜ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿನ ರಗಡ್ ಲುಕ್ ನಿಂದಲೇ ನಟ ಪ್ರಮೋದ್ ಗಮನ ಸೆಳೆಯುತ್ತಿದ್ದಾರೆ.
ಆರ್ಯ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕತ್ತಿಗೊಂದು ದಪ್ಪ ಚೈನು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿಕೊಂಡು ನಿಂತಿರುವ ಪ್ರಮೋದ್ ಲುಕ್ ಗಮನ ಸೆಳೆಯುವಂತಿದೆ. ಈ ಹಿಂದೆ ನಟ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ವಿಭಿನ್ನ ಅಭಿನಯದ ಮೂಲಕ ಗಮನ ಸೆಳೆದಿದ್ದ ಪ್ರಮೋದ್ ಈ 'ಇಂಗ್ಲಿಷ್ ಮಂಜ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟ ಪ್ರಮೋದ್, ನಾನು ಚಿತ್ರದಲ್ಲಿ ಮಂಜನ ಪಾತ್ರಧಾರಿಯಾಗಿದ್ದು, ಓರ್ವ ವಿದ್ಯಾರ್ಥಿ ಹೇಗೆ ಅಪರಾಧ ಪ್ರಪಂಚದ ಬಗ್ಗೆ ತೀವ್ರ ಆಸಕ್ತಿ ಹೊಂದಿರುತ್ತಾನೆ ಎಂಬುದು ಆ ಪಾತ್ರದ ಮೂಲಕ ವಿವರಿಸಲಾಗುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಪ್ರಮೋದ್ ಅವರ ಹೊರತಾಗಿ ಲೋಹಿತಾಶ್ವ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಗಿದ್ದು, ಉಳಿದಂತೆ ಚಿತ್ರದ ಇತರೆ ಪಾತ್ರಗಳಿಗಾಗಿ ಚಿತ್ರತಂಡ ಶೋಧ ಮುಂದುವರೆಸಿದೆ.
ಗಿರೀಶ್ ಕೋಲಾರ ನಿರ್ಮಾಣದ ಈ ಸಿನಿಮಾ ತಂಡ ಜುಲೈ ತಿಂಗಳಿನಲ್ಲಿ ಶೂಟಿಂಗ್ ಆರಂಭಿಸುವ ಆಲೋಚನೆಯಲ್ಲಿದೆ. ಪ್ರಸ್ತುತ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಬಿಆರ್ ಹೇಮಂತ್ ಕುಮಾರ್ ಅವರ ಸಂಗೀತ ನಿರ್ದೇಶನವಿದ್ದು, ಡಾ.ನಾಗೇಂದ್ರ ಪ್ರಸಾದ್ ಮತ್ತು ಸಿಂಪಲ್ ಸುನಿ ಸಾಹಿತ್ಯ ಬರೆಯಲಿದ್ದಾರೆ. ಎಸ್ ನಾಗೇಶ್ ಅವರು ಸಿನಿಮಟೋಗ್ರಫಿ ಜವಾಬ್ದಾರಿ ಹೊತ್ತಿದ್ದು, ರವಿ ವರ್ಮ ಸ್ಟಂಟ್ಸ್ ಬಲ ಚಿತ್ರಕ್ಕಿರಲಿದೆ. ಚೆನ್ನೈ ಮೂಲದ ಧನುಕುಮಾರ್ ಅವರು ನೃತ್ಯಸಂಯೋಜನೆ ಮಾಡಲಿದ್ದಾರೆ
"ಇಂಗ್ಲಿಷ್ ಮಂಜ"ನ ಮೇಲೆ ನಿಮ್ಮ ಪ್ರೀತಿ, ಆಶೀರ್ವಾದ ಇರಲಿ
Advertisement