ನಿರ್ದೇಶಕರು
ನಿರ್ದೇಶಕರು

ಕನ್ನಡದಲ್ಲಿ ನಮಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಿ: ಹೋರಾಟಕ್ಕೆ ಒಂದಾಗಿದ್ದಾರೆ ಸ್ಯಾಂಡಲ್ ವುಡ್ ನಿರ್ದೇಶಕರು

ಸ್ಯಾಂಡಲ್ ವುಡ್ ಚಿತ್ರಗಳಿಗೆ ಕನ್ನಡದಲ್ಲಿ ಪ್ರಮಾಣಪತ್ರ ನೀಡಬೇಕೆಂದು ಸೆನ್ಸಾರ್ ಮಂಡಳಿಯನ್ನು ಒತ್ತಾಯಿಸಿ ಕನ್ನಡದ 12ಕ್ಕೂ ಹೆಚ್ಚು ನಿರ್ದೇಶಕರು ಚಿತ್ರವೊಂದನ್ನು ಮಾಡಲು ಒಟ್ಟು ಸೇರಿದ್ದಾರೆ.
Published on

ಸ್ಯಾಂಡಲ್ ವುಡ್ ಚಿತ್ರಗಳಿಗೆ ಕನ್ನಡದಲ್ಲಿ ಪ್ರಮಾಣಪತ್ರ ನೀಡಬೇಕೆಂದು ಸೆನ್ಸಾರ್ ಮಂಡಳಿಯನ್ನು ಒತ್ತಾಯಿಸಿ ಕನ್ನಡದ 12ಕ್ಕೂ ಹೆಚ್ಚು ನಿರ್ದೇಶಕರು ಚಿತ್ರವೊಂದನ್ನು ಮಾಡಲು ಒಟ್ಟು ಸೇರಿದ್ದಾರೆ.

ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ಅವರ ಕಾಳಜಿಯಾಗಿದ್ದು, ಇದನ್ನು ಹಿಂದಿ ವಿರೋಧಿ ಪ್ರತಿಭಟನೆ ಅಥವಾ ಹೋರಾಟ ಎಂದು ಕರೆಯದೆ ಕನ್ನಡಪರ ಹೋರಾಟ ಎಂದು ಈ ನಿರ್ದೇಶಕರು ಭಾವಿಸಿದ್ದಾರೆ.

ಖ್ಯಾತ ನಿರ್ದೇಶಕರಾದ ಎಂ ಎಸ್ ಸತ್ಯು, ಕೆ ಎಂ ಚೈತನ್ಯ, ಪವನ್ ಒಡೆಯರ್ , ಪಿ ಶೇಷಾದ್ರಿ, ಅರವಿಂದ್ ಶಾಸ್ತ್ರಿ, ಗಿರಿರಾಜ್ ಎಂ, ಸುನಿ, ಅರವಿಂದ್ ಶಾಸ್ತ್ರಿ ಮತ್ತು ಗೌತಮ್ ಐಯ್ಯರ್ ಎಲ್ಲರೂ ಒಟ್ಟು ಸೇರಿ ಚಿತ್ರ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ವಿಷಯವನ್ನಿಟ್ಟುಕೊಂಡು ತಲಾ 15 ನಿಮಿಷದ ಸಿನೆಮಾ ಮಾಡುತ್ತಿದ್ದಾರೆ. ನಂತರ ಎಲ್ಲವನ್ನೂ ಒಟ್ಟು ಸೇರಿಸಿ ಒಂದು ಚಿತ್ರ ಮಾಡಿ ಸೆನ್ಸಾರ್ ಮಂಡಳಿಗೆ ಸಲ್ಲಿಸಲಿದ್ದಾರೆ.

ತಮ್ಮ ಚಿತ್ರ ನಿರ್ಮಾಪಕರಾದ ಯುನೈಟೆಡ್ ಕ್ಲಬ್ ನ ಬೆಂಬಲದೊಂದಿಗೆ ಮಾಡುತ್ತಿರುವ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪವನ್ ಕುಮಾರ್, ಇಲ್ಲಿಯವರೆಗೆ ಕನ್ನಡ ಸಿನೆಮಾಗಳಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಪ್ರಮಾಣಪತ್ರ ನೀಡುತ್ತಿದ್ದರು.

ಸ್ಥಳೀಯ ಭಾಷೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಚಿತ್ರ ನಿರ್ದೇಶಕರಾಗಿ ನಮ್ಮ ಕಾಳಜಿ ಕನ್ನಡ ಸಿನೆಮಾಗಳಿಗೆ ಕನ್ನಡದಲ್ಲಿ ಪ್ರಮಾಣಪತ್ರ ನೀಡಬೇಕೆಂಬುದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟು ಸೇರಿ ಚಿತ್ರ ತಯಾರು ಮಾಡುತ್ತಿರುವುದು ಮೊದಲ ಹೆಜ್ಜೆ ಎಂದರು.

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಇದನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರೆ.ಸದ್ಯ ತಯಾರಿ ಹಂತದಲ್ಲಿದ್ದು ಚಿತ್ರ ತಯಾರಾದ ಮೇಲೆ ಸರ್ಟಿಫಿಕೇಟ್ ಗೆ ಸಲ್ಲಿಸಲಿದ್ದಾರೆ. ಸೆನ್ಸಾರ್ ಬೋರ್ಡ್ ನ ನಿಯಮಗಳನ್ನು ಪಾಲಿಸಲಿದ್ದೇವೆ. ಸೆನ್ಸಾರ್ ಮಂಡಳಿ ಕನ್ನಡದಲ್ಲಿ ಸರ್ಟಿಫಿಕೇಟ್ ನೀಡಬೇಕೆನ್ನುವ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ನಾವು ಪ್ರಮಾಣಪತ್ರವಿಲ್ಲದೆ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು.

ಸಿನೆಮಾ ಕಾಯ್ದೆ ಪ್ರಕಾರ ಸರ್ಟಿಫಿಕೇಟ್ ಇಲ್ಲದೆ ಚಿತ್ರ ತೆರೆಗೆ ತರುವುದು ಕಾನೂನಿಗೆ ವಿರುದ್ಧವಾಗುತ್ತದೆ. ಹಾಗೆಂದು ಕನ್ನಡದಲ್ಲಿ ಅವರು ಪ್ರಮಾಣಪತ್ರ ನೀಡದಿದ್ದರೆ ಅದು ಕೂಡ ದೊಡ್ಡ ತಪ್ಪಾಗುತ್ತದೆ ಎಂದರು. ಸ್ಥಳೀಯ ಭಾಷೆಗೆ ಆದ್ಯತೆ ನೀಡುವ ವಿಷಯ, ಕಥೆ ಹೊಂದಿರುವ ಚಿತ್ರ ತಯಾರಿಸುವಂತೆ ಇನ್ನೂ ಹಲವು ನಿರ್ದೇಶಕರನ್ನು ಸಂಪರ್ಕಿಸುತ್ತಿದ್ದಾರಂತೆ.

ನಮ್ಮ ಹೋರಾಟ ಹಿಂದಿ ವಿರುದ್ಧ ಅಲ್ಲ, ನಮ್ಮದು ಕನ್ನಡಪರ ಹೋರಾಟವಾಗಿದೆ, ಸೋಷಿಯಲ್ ಮೀಡಿಯಾಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಹಲವರು ಹೋರಾಟ ಮಾಡುತ್ತಿದ್ದಾರೆ. ಚಿತ್ರದ ಮೂಲಕ ನಮ್ಮದು ಇದು ಮೊದಲ ಪ್ರಯತ್ನ, ನಮ್ಮ ಭಾಷೆಯಲ್ಲಿ ನಮಗೆ ಕೊಡಿ ಎಂಬುದು ನಮ್ಮ ಚಿತ್ರದ ಉದ್ದೇಶ ಎಂದು ನಿರ್ದೇಶಕ ಕೆ ಎಂ ಚೈತನ್ಯ ಹೇಳುತ್ತಾರೆ.

X

Advertisement

X
Kannada Prabha
www.kannadaprabha.com