ಚೆನ್ನೈ: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಚಿತ್ರಾ (56) ಅವರು ಸಾವನ್ನಪ್ಪಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಹೃದಯಾಘಾತದಿಂದ ಚಿತ್ರಾ ಅವರು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆಂದು ವರದಿಗಳು ತಿಳಿಸಿವೆ. ಚಿತ್ರಾ ಅವರು ಪತಿ ವಿಜಯರಾಘವನ್ ಪುತ್ರಿ ಮಹಾಲಕ್ಷ್ಮಿ ಅವರನ್ನು ಅಗಲಿದ್ದಾರೆ.
ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಚಿತ್ರಾ ಅವರು ಜನರ ಮನಗೆದ್ದಿದ್ದರು. ಅಲ್ಲದೆ, ವಿವಿಧ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಚಿತ್ರಾ ನಟಿಸಿದ್ದಾರೆ.
ಬಾಲನಟಿಯಾಗಿಯೇ ಚಿತ್ರಾ ಅವರು ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಕಮಲ್ ಹಾಸನ್ ಅಭಿನಯದ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಅವರು ಬಾಲನಟಿಯಾಗಿ ಬಣ್ಣ ಹಚ್ಚಿದ್ದರು. ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 1990ರಲ್ಲಿ ವಿಜಯ್ ರಾಘವನ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಸಿನಿಮಾಗಳಿಂದ ದೂರು ಉಳಿದುಕೊಂಡಿದ್ದ ಅವರು ಕುಟುಂಬದ ಕಡೆಗೆ ಹೆಚ್ಚು ಗಮನ ನೀಡಿದರು. ಈಗ ಪತಿ ಮತ್ತು ಮಗಳು ಮಹಾಲಕ್ಷ್ಮೀ ಅವರನ್ನು ಚಿತ್ರಾ ಅಗಲಿದ್ದಾರೆ.
‘ನಲ್ಲೆನೈ’ ಚಿತ್ರಾ ಎಂದು ಕೂಡ ಅವರನ್ನು ಕರೆಯಲಾಗುತ್ತಿತ್ತು. ಎಣ್ಣೆ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸಿ ಫೇಮಸ್ ಆಗಿದ್ದರಿಂದ ಅವರನ್ನು ಹೀಗೆ ಕರೆಯುತ್ತಿದ್ದರು. ಮಲಯಾಳಂನಲ್ಲಿ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಅಟ್ಟಕಳಶಂ’. ಆ ಚಿತ್ರದಲ್ಲಿ ಮೋಹನ್ ಲಾಲ್ ಮತ್ತು ಪ್ರೇಮ್ ನಜಿರ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಚಿತ್ರಾಗೆ ಸಿಕ್ಕಿತ್ತು. ಮಾಲಿವುಡ್ನ ಮತ್ತೋರ್ವ ಸ್ಟಾರ್ ನಟ ಮಮ್ಮೂಟ್ಟಿ ಜೊತೆಗೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Advertisement