'ಈ ಫೋಟೋಗಾಗಿ ಸುಮಾರು 36 ವರ್ಷಗಳ ಕಾಲ ಕಾದಿದ್ದೆ': ಕಪಿಲ್ ದೇವ್ ಜೊತೆಗಿನ ಫೋಟೋ ಹಂಚಿಕೊಂಡ ಕಿಚ್ಚ ಸುದೀಪ್

ಕಪಿಲ್ ದೇವ್...ಭಾರತದ ಕ್ರಿಕೆಟ್ ಲೋಕ ಕಂಡ ಜೀವಂತ ದಂತಕಥೆ, 1983ರಲ್ಲಿ ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದ್ದನ್ನು ಯಾರು ತಾನೇ ಮರೆಯಲು ಸಾಧ್ಯ? ಈಗ ಅವರ ಜೀವನ ಚರಿತ್ರೆ ಮತ್ತು 83ರ ವಿಶ್ವಕಪ್ ಆಧರಿಸಿದ ಚಿತ್ರ ಇದೇ ತಿಂಗಳ ಡಿಸೆಂಬರ್ 24ರಂದು ತೆರೆಗೆ ಬರುತ್ತಿದೆ.
ಕಪಿಲ್ ದೇವ್ ಜೊತೆಗೆ ಕಿಚ್ಚ ಸುದೀಪ್
ಕಪಿಲ್ ದೇವ್ ಜೊತೆಗೆ ಕಿಚ್ಚ ಸುದೀಪ್
Updated on

ಕಪಿಲ್ ದೇವ್...ಭಾರತದ ಕ್ರಿಕೆಟ್ ಲೋಕ ಕಂಡ ಜೀವಂತ ದಂತಕಥೆ, 1983ರಲ್ಲಿ ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದ್ದನ್ನು ಯಾರು ತಾನೇ ಮರೆಯಲು ಸಾಧ್ಯ? ಈಗ ಅವರ ಜೀವನ ಚರಿತ್ರೆ ಮತ್ತು 83ರ ವಿಶ್ವಕಪ್ ಆಧರಿಸಿದ ಚಿತ್ರ ಇದೇ ತಿಂಗಳ ಡಿಸೆಂಬರ್ 24ರಂದು ತೆರೆಗೆ ಬರುತ್ತಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ ಇದಕ್ಕೆ ನಾಯಕ, ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಿಗೆ ಡಬ್ ಆಗಿದೆ. ಕನ್ನಡದಲ್ಲಿ ಇದನ್ನು ಪ್ರಸ್ತುತಪಡಿಸಲು ರಿಲಯನ್ಸ್ ಎಂಟರ್ಟೈನ್ ಮೆಂಟ್ ಜೊತೆಗೆ ನಟ ಕಿಚ್ಚ ಸುದೀಪ್ ಕೈಜೋಡಿಸಿದ್ದಾರೆ.

ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿ ಇಡೀ ಚಿತ್ರತಂಡ ಹಾಗೂ 83ರ ವಿಶ್ವಕಪ್ ನ ನಾಯಕ ಕಪಿಲ್ ದೇವ್ ಸೇರಿದಂತೆ ಪ್ರಮುಖ ಆಟಗಾರರು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ನಡೆಸಿದ್ದರು. ಅದರಲ್ಲಿ ಕಿಚ್ಚ ಸುದೀಪ್ ನೆನಪು ಮಾಡಿಕೊಂಡ ಒಂದು ವಿಷಯ ಸಾಕಷ್ಟು ಸುದ್ದಿಯಾಗಿದೆ.

ಕಿಚ್ಚ ಸುದೀಪ್ ಎರಡು ದಿನಗಳ ಹಿಂದೆ ಒಂದು ಫೋಟೋ ಹಾಕಿ ''ನಾನು ಈ ಚಿತ್ರಕ್ಕಾಗಿ ಸುಮಾರು 36 ವರ್ಷಗಳ ಕಾಲ ಕಾದಿದ್ದೆ, ಇಂದು ಅದು ನೆರವೇರಿದೆ, ಇದನ್ನು ಸಾಕಾರವಾಗಿಸಿದ ನಮ್ರತೆಯ ಪ್ರತಿರೂಪದಂತಿರುವ ಕಪಿಲ್ ಸರ್ ಅವರಿಗೆ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದ್ದರು.

ಹಾಗಿದ್ದರೆ ಈ ಫೋಟೋ ಹಿಂದಿನ ಕಥೆಯೇನು, ಅದನ್ನು ಕಿಚ್ಚ ಸುದೀಪ್ ಅವರೇ ಮೊನ್ನೆ ನಡೆದಿದ್ದ ಕಾರ್ಯಕ್ರಮದಲ್ಲಿ ವಿವರಿಸಿದ್ದರು. 
''ಅದು 1987 ಅಥವಾ 88 ಇದ್ದಿರಬೇಕು, ಭಾರತದ ಕ್ರಿಕೆಟ್ ತಂಡ ಬೆಂಗಳೂರಿಗೆ ಬಂದಿತ್ತು. ಆಟಗಾರರು ವೆಸ್ಟೆಂಡ್ ಹೊಟೇಲ್ ನಲ್ಲಿ ತಂಗಿದ್ದರು. ಕ್ರಿಕೆಟ್ ಹುಚ್ಚು ವಿಪರೀತವಿದ್ದುದರಿಂದ ಆಟಗಾರರನ್ನು ಭೇಟಿಯಾಗಬೇಕೆಂದು ಅವಸರದಲ್ಲಿ ಓಡಿಹೋಗಿದ್ದೆ, ಹೋಗುವ ಅವಸರದಲ್ಲಿ ಕಾಲಿಗೆ ಬೇರೆ ಬೇರೆ ಶೂ ಹಾಕಿಕೊಂಡು ಓಡಿದ್ದೆ. ಕಪಿಲ್ ಸರ್ ಅವರನ್ನು ಭೇಟಿಯಾದೆ, ಆಗ ನಾನು ತುಂಬಾ ಚಿಕ್ಕವನು. ಕಪಿಲ್ ಸರ್ ನ್ನು ಕಂಡವನೇ ಸರ್ ಒಂದು ಫೋಟೋ ಬೇಕು ಎಂದು ಕೇಳಿಕೊಂಡೆ. ಅದಕ್ಕೆ ಅವರು ಒಪ್ಪಿದರು. ನನ್ನ ಜೊತೆ ನನ್ನ ಸೋದರಿ ಇದ್ದಳು, ಫ್ಯೂಜಿ ಕ್ಯಾಮರಾ ತೆಗೆದುಕೊಂಡು ಹೋಗಿದ್ದೆವು. ಆದರೆ ನನ್ನ ದುರದೃಷ್ಟಕ್ಕೆ ಕ್ಯಾಮರಾ ಕೈಕೊಟ್ಟಿತ್ತು. ನನಗೆ ಬಹಳ ಬೇಸರವಾಗಿ ಅಳುಬಂತು. ಆಗ ಕಪಿಲ್ ಸರ್ ಅವರೇ ಅಳಬೇಡ, ಒಂದು ದಿನ ನಾವು ಫೋಟೋ ತೆಗೆದುಕೊಳ್ಳೋಣ ಎಂದಿದ್ದರು, ಆ ದಿನ ಇಂದು ಬಂದಿದೆ'' ಎಂದರು.

ಅದಕ್ಕೆ ಕಪಿಲ್ ದೇವ್ ಕೂಡಲೇ ಕಿಚ್ಚ ಸುದೀಪ್ ಅವರನ್ನು ಬಾಚಿ ತಬ್ಬಿಕೊಂಡು ಕ್ಯಾಮರಾಕ್ಕೆ ವೇದಿಕೆಯಲ್ಲಿ ನಗುತ್ತಾ ಖುಷಿಯಿಂದ ಕಿಚ್ಚ ಸುದೀಪ್ ಜೊತೆ ಫೋಸ್ ಕೊಟ್ಟೇ ಬಿಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಕಪಿಲ್ ದೇವ್ 1983ರಲ್ಲಿ ನಾವು ಏನು ಮಾಡಿದ್ದೆವು ಎಂದು ಮರೆತುಹೋಗಿತ್ತು, ಅದನ್ನು ಇಂದು ನಿರ್ದೇಶಕ ಕಬೀರ್ ಖಾನ್ ಮರುನೆನಪಿಸಿದ್ದಾರೆ. ನಾನು ಮತ್ತು ನನ್ನ ತಂಡ ಚಿತ್ರ ನೋಡಲು ಕಾತರರಾಗಿದ್ದೇವೆ. ಈ ಚಿತ್ರದ ಉತ್ತಮ ಹೆಸರು ಗಳಿಸಬಹುದೆಂಬ ನಿರೀಕ್ಷೆಯಲ್ಲಿದ್ದೇವೆ, ಆ ಗಳಿಗೆಯನ್ನು ತೆರೆಯ ಮೇಲೆ ನೋಡಿ ಸಂಭ್ರಮಿಸುತ್ತೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com