ಸಂಚಾರಿ ವಿಜಯ್
ಸಂಚಾರಿ ವಿಜಯ್

ಸಂಚಾರಿ ವಿಜಯ್ ಬದುಕು, ಬಣ್ಣ!

ಸಂಚಾರಿ ವಿಜಯ್ ಹೆಸರಿನಿಂದ ಜನರಿಗೆ ಚಿರಪರಿಚಿತರಾದ ಬಿ. ವಿಜಯ್ ಕುಮಾರ್ ಚಲನಚಿತ್ರ ಮತ್ತು ನಾಟಕ ರಂಗದಲ್ಲಿ ತೊಡಗಿಸಿಕೊಂಡವರು. ಸಂಚಾರಿ ಹೆಸರಿನ ನಾಟಕ ತಂಡದಲ್ಲಿದ್ದ ಕಾರಣ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
Published on

ಬೆಂಗಳೂರು: ಸಂಚಾರಿ ವಿಜಯ್ ಹೆಸರಿನಿಂದ ಜನರಿಗೆ ಚಿರಪರಿಚಿತರಾದ ಬಿ. ವಿಜಯ್ ಕುಮಾರ್ ಚಲನಚಿತ್ರ ಮತ್ತು ನಾಟಕ ರಂಗದಲ್ಲಿ ತೊಡಗಿಸಿಕೊಂಡವರು. ಸಂಚಾರಿ ಹೆಸರಿನ ನಾಟಕ ತಂಡದಲ್ಲಿದ್ದ ಕಾರಣ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ನಟ ಸಂಚಾರಿ ವಿಜಯ್ ಜನಿಸಿದ್ದು 1983 ಜುಲೈ 17. ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ. ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು, ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು.

ಇಂತಹ ಕುಟುಂಬದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದರು.

ಉಪನ್ಯಾಸಕ ವೃತತ್ತಿ:
ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್‍ನ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಇನ್ನಿತರ ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ, ಎರಡು ನಾಟಕಗಳನ್ನು ನಿರ್ದೇಶಿಸಿದ್ದರು.

ಹಾಡುಗಾರನೂ ಹೌದು :
ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿ, ಹಲವಾರು ನಾಟಕಗಳಲ್ಲಿ ಹಾಡಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸಿದ್ದರು.

ಒಬ್ಬ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮಾದಲ್ಲಿಯೂ ಕೆಲಸ ಮಾಡಿದ್ದರು.

೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರಿಗೆ ಕನ್ನಡದ ನಾನು ಅವನಲ್ಲ…ಅವಳು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ. ಇದೇ ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

ರಂಗಭೂಮಿಯಲ್ಲಿ ಇವರು, ಸಾವು ಧ್ಯೇಯಕ್ಕಿಲ್ಲ, ಸಾಂಬಶಿವ ಪ್ರಹಸನ, ಸ್ಮಶಾನ ಕುರುಕ್ಷೇತ್ರ, ಸಾವಿರದವಳು, ಪ್ಲಾಸ್ಟಿಕ್ ಭೂತ, ಶೂದ್ರ ತಪಸ್ವಿ, ಸತ್ಯಾಗ್ರಹ, ಸಂತೆಯೊಳಗೊಂದು ಮನೆಯ ಮಾಡಿ, ಮಾರ್ಗೊಸ ಮಹಲ್, ಮಹಾಕಾಲ, ಅರಹಂತ, ಕಮಲಮಣಿ ಕಾಮಿಡಿ ಕಲ್ಯಾಣ, ನರಿಗಳಿಗೇಕೆ ಕೋಡಿಲ್ಲ, ವ್ಯಾನಿಟಿ ಬ್ಯಾಗ್ ಸೇರಿದಂತೆ ಹಲವಾರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಅಲ್ಲದೆ ಪಿನಾಕಿಯೋ ಮತ್ತು ಮಿಸ್ ಅಂಡರ್‌ಸ್ಟ್ಯಾಂಡಿಂಗ್ ನಾಟಕಗಳನ್ನು ನಿರ್ದೇಶಿಸಿದ್ದರು.

ಕಿರುತೆರೆಯ ಧಾರಾವಾಹಿಗಳಾದ ನಗುನಗುತಾ ನಲಿ, ಹೊಸ ಬಾಳಿಗೆ ನೀ ಜೊತೆಯಾದೆ, ಪಂಚರಂಗಿ ಪೋಂ..ಪೋಂ, ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ, ಅನಾವರಣಗಳಲ್ಲಿ ನಟಿಸಿದ್ದರು.

ರೌರವ, ಟಿಕೆಟ್, ಮರ್ಡರ್, ಕವಲೊಡೆದ ದಾರಿ, ಅಹಂ ಬ್ರಹ್ಮಾಸ್ಮಿ, ಅಜ್ಜಿ ಕಥೆ ಇವರು ನಟಿಸಿದ ಕಿರುಚಿತ್ರಗಳಾಗಿವೆ.

ರಂಗಪ್ಪ ಹೋಗ್ಬಿಟ್ನಾ, ರಾಮರಾಮ ರಘುರಾಮ, ವಿಲನ್, ದಾಸ್ವಾಳ, ಒಗ್ಗರಣೆ, ಹೋಂ ಸ್ಟೇ, ಸಿನೆಮಾ ಮೈ ಡಾರ್ಲಿಂಗ್, ಮಾರಿಕೊಂಡವರು, ಸಿಪಾಯಿ, ಶುದ್ಧಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಭಲೇ ಜೋಡಿ, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ವೈಟ್ ಹಾರ್ಸ್ ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಜೂನ್ 12ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೂನ್ 15ರ ಮುಂಜಾನೆ 3.34ರ ವೇಳೆಗೆ ಕೊನೆಯುಸಿರೆಳೆದ ನಟ ವಿಜಯ್ ಅತ್ಯಲ್ಪ ಸಮಯದಲ್ಲಿಯೇ ಬದುಕಿನ ಸಂಚಾರ ಮುಗಿಸಿ ವಿಧಿಯ ಕೈಸೇರಿದ್ದು ವಿಪರ್ಯಾಸವೇ ಸರಿ.

X

Advertisement

X
Kannada Prabha
www.kannadaprabha.com