ಅವಹೇಳನಕಾರಿ ಪೋಸ್ಟ್ ನಿಂದ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ: ವಿನೋದ್ ರಾಜ್ 

ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಅವಹೇಳನಕಾರಿ ಪೋಸ್ಟ್ ಬಗ್ಗೆ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರ ಸೈಬರ್ ಕ್ರೈಂ ಬ್ರ್ಯಾಂಚ್ ಗೆ ಬಂದಿದ್ದ ನಟ ವಿನೋದ್ ರಾಜ್
ನಗರ ಸೈಬರ್ ಕ್ರೈಂ ಬ್ರ್ಯಾಂಚ್ ಗೆ ಬಂದಿದ್ದ ನಟ ವಿನೋದ್ ರಾಜ್

ಬೆಂಗಳೂರು: ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಅವಹೇಳನಕಾರಿ ಪೋಸ್ಟ್ ಬಗ್ಗೆ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿವಾದ-ರಾಜಕೀಯದಿಂದ ದೂರವುಳಿದು ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ತಮ್ಮ ಮತ್ತು ತಾಯಿ ಲೀಲಾವತಿಯವರ ಬಗ್ಗೆ ಯಾಕೆ ಈ ರೀತಿ ಸುಳ್ಳು, ಅವಮಾನಕರ, ಮಾನ ಹೋಗುವಂತಹ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ನಟ ವಿನೋದ್ ರಾಜ್ ನೋವು ತೋಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ದೂರ ಇರುವ ವಿನೋದ್ ರಾಜ್‌ಗೆ ಅವಹೇಳನಕಾರಿ ಪೋಸ್ಟ್‌ಗಳ ಬಗ್ಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ಸ್ನೇಹಿತರು ವಿನೋದ್ ರಾಜ್‌ಗೆ ಮಾಹಿತಿ ನೀಡಿದ್ದರು. ಸ್ನೇಹಿತರ ಮೂಲಕ ಅವಹೇಳನಕಾರಿ ಪೋಸ್ಟ್‌ಗಳ ಬಗ್ಗೆ ತಿಳಿದುಕೊಂಡ ವಿನೋದ್ ರಾಜ್ ಎಂಟು ತಿಂಗಳ ಹಿಂದೆಯೇ ಸೈಬರ್ ಕ್ರೈಂಗೆ ದೂರು ನೀಡಿದ್ದರು.

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಪೊಲೀಸರು ನನ್ನ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆ ಸಂಬಂಧ ಇಂದು ಕರೆದಿದ್ದರು. ತನಿಖೆಗೆ ನಾನು ಸಹಕರಿಸಿದ್ದೇನೆ. ನೋಡೋಣ ತಪ್ಪಿತಸ್ಥರಿಗೆ ಶಿಕ್ಷಯಾಗಲಿದೆ. ಈ ರೀತಿಯ ಕೃತ್ಯಗಳು ಕಲಾವಿದರಿಗಾಗಲಿ, ಸಾಮಾನ್ಯರಿಗಾಗಲಿ ಆಗಬಾರದು. ಯುವಕರು ಕೆಟ್ಡ ಮನಸ್ಥಿತಿಯಿಂದ ಹೊರಬರಬೇಕು ಎಂದು ನಟ ವಿನೋದ್ ರಾಜ್ ಹೇಳಿದರು.

''ನಮಗೆ ಈ ಪೇಸ್ ಬುಕ್, ವಾಟ್ಸಾಪ್ ಎಲ್ಲ ಅಷ್ಟೊಂದು ಗೊತ್ತಿಲ್ಲ. ನಾನು ಫೇಸ್ ಬುಕ್ ಬಳಸುವುದೂ ಇಲ್ಲ. ಸ್ನೇಹಿತರು ಹೇಳಿದಾಗ ಗೊತ್ತಾಯಿತು. ಅದರಲ್ಲಿ ಹಲವು ಅಶ್ಲೀಲ ಚಿತ್ರಗಳಿವೆ. ಬೇರೆಯವರಿಗೆ ನನ್ನ ಮುಖ ಹಾಕಿದ್ದಾರೆ. ಮನಸ್ಸಿಗೆ ತುಂಬಾ ನೋವಾಯಿತು. ಹೀಗಾಗಿ ಸೈಬರ್ ಕ್ರೈಮ್‌ಗೆ ಕಂಪ್ಲೇಂಟ್ ಕೊಟ್ಟಿದ್ವಿ. ತನಿಖೆ ಮಾಡುತ್ತಿದ್ದಾರೆ ಎಂದು ವಿನೋದ್ ರಾಜ್ ತಿಳಿಸಿದರು.

ನಾವು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ಮರ್ಯಾದೆ ಕಳೆಯೋಕೆ ಹೀಗೆ ಮಾಡುತ್ತಿದ್ದಾರೆ. ನಮ್ಮ ತಾಯಿಗೆ ಅನಾರೋಗ್ಯ ಬೇರೆ ಕಾಡುತ್ತಿದೆ. ಅವರಿಗೆ ನಡೆಯೋಕೆ ಕಷ್ಟ ಆಗುತ್ತಿದೆ. ಈ ಮಧ್ಯೆ ಹೀಗಾಗುತ್ತಿದ್ದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದರು.

ಒಲಿಂಪಿಕ್ ನಲ್ಲಿ ನಮ್ಮ ದೇಶದ ಮಹಿಳಾ ಕ್ರೀಡಾಪಟುಗಳ ಸಾಧನೆ ನೋಡಿದರೆ ನಾವು ಪುರುಷರು ಏನೂ ಇಲ್ವಲ್ಲ ಅನ್ನಿಸುತ್ತದೆ. ಹಿರಿಯರು ಹೇಳಿಕೊಟ್ಟ ಪಾಠಗಳು, ವಿನಯತನ, ನೈತಿಕತೆ, ಸಹಕಾರ, ಸಮಾಜಸೇವೆ ಮಾಡಿಕೊಂಡು ಹೋಗಬೇಕು. ನಮ್ಮ ಮರ್ಯಾದೆ ಹರಾಜು ಹಾಕಿಕೊಳ್ಳುವ ಕೆಲಸ ಮಾಡಬಾರದು ಎಂದು ಇದೇ ಸಂದರ್ಭದಲ್ಲಿ ವಿನೋದ್ ರಾಜ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com