Online Desk
ಒಟಿಟಿ ತಾಣವಾದ ಅಮೇಜಾನ್ ಪ್ರೈಮ್ ರತ್ನನ್ ಪ್ರಪಂಚ ಸಿನಿಮಾದ ತನ್ನ ಆವೃತ್ತಿಯ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ. ಕೆ ಆರ್ ಜಿ, ಸ್ಟುಡಿಯೋಸ್ ಬ್ಯಾನರ್ ಅಡಿ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಿಸಿದ್ದಾರೆ. ಡಾಲಿ ಧನಂಜಯ್, ರೆಬಾ ಮೋನಿಕಾ ಜಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಉಮಾಶ್ರೀ, ರವಿಶಂಕರ್, ಅನು ಪ್ರಭಾಕರ್, ಪ್ರಮೋದ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಕೃಷ್ಣ ತಾರಾಗಣದಲ್ಲಿದ್ದಾರೆ.
ರತ್ನನ್ ಪ್ರಪಂಚ ರತ್ನಾಕರನ ಜೀವನ ಮತ್ತು ಪ್ರಯಾಣದ ಸುತ್ತ ಕೇಂದ್ರೀಕೃತವಾದ ಒಂದು ವಿನೂತನ ಟ್ರಾವೆಲ್ ಕಾಮಿಡಿ ಡ್ರಾಮಾ ಸಿನಿಮಾ. ಕನ್ನಡದಲ್ಲಿ ಈ ಪ್ರಕಾರದ ಸಿನಿಮಾಗಳು ಬಂದಿರುವುದು ಕೆಲವೇ. ಅವುಗಳ ಸಾಲಿಗೆ ನೂತನ ಸೇರ್ಪಡೆ ರತ್ನನ್ ಪ್ರಪಂಚ.
ಕಿಸ್, ಭರಾಟೆಯಲ್ಲಿ ಮಿಂಚಿದ್ದ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ
ಈ ಸಿನಿಮಾದ ನಾಯಕ ರತ್ನಾಕರ. ಆತ ಜೀವನದ ಕಷ್ಟ ಸುಖಗಳನ್ನು ಎದುರುಗೊಳ್ಳುತ್ತಲೇ ತನ್ನ ಅಸ್ತಿತ್ವ ಮತ್ತು ಮೂಲವನ್ನು ಹುಡುಕುವ ವ್ಯಕ್ತಿ. ಜೀವನದ ಪಯಣದಲ್ಲಿ ಹಲವು ಸಂದಿಗ್ಧತೆಗಳಿಗೆ ಅವನು ಸಾಕ್ಷಿಯಾಗುತ್ತಾನೆ. ಈ ಪ್ರಯಾಣದಲ್ಲಿ, ಆತನ ಜೊತೆಯಲ್ಲಿ ಪತ್ರಕರ್ತೆ ಮಯೂರಿ ಜೊತೆಯಾಗುತ್ತಾರೆ. ಅವಳು ಕಥೆಯೊಂದರ ಹಿಂದೆ ಬಿದ್ದಿರುತ್ತಾಳೆ. ಈ ಎರಡೂ ಪಾತ್ರಗಳು ಜೊತೆಯಾಗಿ ಕೈಗೊಳ್ಳುವ ಪಯಣವೇ ರತ್ನನ್ ಪ್ರಪಂಚ.
240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಹರಡಿರುವ ಪ್ರೈಮ್ ವೀಡಿಯೋ ಗ್ರಾಹಕರನ್ನು ರತ್ನನ್ ಪ್ರಪಂಚ ತಲುಪಲಿದೆ. ವಿನೂತನ ಹಿಂದೆಂದೂ ಕೇಳಿರದ ಕಥೆಯನ್ನು ರತ್ನನ್ ಪ್ರಪಂಚ ಹೊಂದಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ವಿಶ್ವಾದ್ಯಂತ ಪ್ರೇಕ್ಷಕರಿಗೆ ಈ ಕಥೆಯನ್ನು ಸಾದರ ಪಡಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದು ನಿರ್ದೇಶಕ ರೋಹಿತ್ ಪದಕಿ ಈ ಹಿಂದೆಯೇ ಸಂಭ್ರಮ ಪಟ್ಟಿದ್ದರು.