ಚೆನ್ನೈ: ಹಿರಿಯ ನಟ ಶರತ್ ಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಶರತ್ ಕುಮಾರ್ ತೀವ್ರ ಅಸ್ವಸ್ಥರಾಗಿದ್ದು, ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶರತ್ ಕುಮಾರ್ , ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ರಾಜಕುಮಾರ, ದರ್ಶನ್ ಅಭಿನಯದ ಸಾರಥಿ, ಚೇತನ್ ಅಭಿನಯದ ಮೈನಾ, ಶಿವಣ್ಣನ 'ಸಂತೆಯಲ್ಲಿ ನಿಂತ ಕಬೀರ, ಸೀತಾರಾಮ ಕಲ್ಯಾಣ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ.
ತೀವ್ರ ನಿರ್ಜಲೀಕರಣ, ಅತಿಸಾರದಿಂದ ಶರತ್ ಕುಮಾರ್ ಬಳಲುತ್ತಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಸದ್ಯಕ್ಕೆ ತಮಿಳಿನ ದಿ ಸ್ಮೈಲ್ ಮ್ಯಾನ್, ವರಿಸು ಮತ್ತಿತರ ಸಿನಿಮಾಗಳಲ್ಲಿ ಶರತ್ ಕುಮಾರ್ ಅಭಿನಯಿಸುತ್ತಿದ್ದರು.
Advertisement