ಚೆನ್ನೈ: ತಮಿಳಿನ ಜನಪ್ರಿಯ ನಟ ಕಮಲ್ ಹಾಸನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳ್ ನಿಧಿ ಮೈಯಂ ಪಕ್ಷದ ಮುಖ್ಯಸ್ಥರು ಆಗಿರುವ ಕಮಲ್ ಹಾಸನ್ ಜ್ವರ, ಕೆಮ್ಮು ಮತ್ತು ಶೀತದಿಂದಾಗಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿರುವುದಾಗಿ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯ ಕಮಲ್ ಹಾಸನ್ ಚೇತರಿಸಿಕೊಳ್ಳುತ್ತಿದ್ದು, ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ತೆಲುಗು ನಿರ್ದೇಶಕ ಕೆ. ವಿಶ್ವನಾಥ್ ಬುಧವಾರ ಹೈದ್ರಾಬಾದ್ ನಲ್ಲಿರುವ ನಿವಾಸದಲ್ಲಿ 68 ವರ್ಷದ ಕಮಲ್ ಹಾಸನ್ ಅವರನ್ನು ಭೇಟಿಯಾದ ಕೆಲ ತಾಸುಗಳ ನಂತರ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದುಬಂದಿತ್ತು.
ನಿರ್ದೇಶಕ ಕೆ. ವಿಶ್ವನಾಥ್ ಅವರನ್ನು ಭೇಟಿಯಾದ ವಿಚಾರವನ್ನು ಕಮಲ್ ಹಾಸನ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಕಮಲ್ ಹಾಸನ್ ಅವರು ತಮಿಳಿನ ಬಿಗ್ ಬಾಸ್ ಆರನೇ ಸೀಸನ್ ಹೋಸ್ಟಿಂಗ್, ಶಂಕರ್ ಅವರ ಭಾರತೀಯ 2 ರ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದ ಕಮಲ್ ಹಾಸನ್ ಮಣಿರತ್ನಂ ಅವರ ಕೆಹೆಚ್ 234 ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
Advertisement