ಮುಂದಿನ ವರ್ಷಗಳಲ್ಲಿ ಹೊಂಬಾಳೆ ಫಿಲ್ಮ್ಸ್ ನಿಂದ ಭಾರತೀಯ ಚಿತ್ರರಂಗದಲ್ಲಿ 3,000 ಕೋಟಿ ಹೂಡಿಕೆ!
ಬ್ಲಾಕ್‌ಬಸ್ಟರ್‌ಗಳಾದ 'ಕೆಜಿಎಫ್' ಮತ್ತು 'ಕಾಂತಾರ' ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಮುಂಬರುವ ಐದು ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ 3,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಗುರಿ ಹೊಂದಿದೆ.
Published: 23rd December 2022 08:21 PM | Last Updated: 23rd December 2022 08:21 PM | A+A A-

ಕಾಂತಾರ-ಕೆಜಿಎಫ್
ಬ್ಲಾಕ್‌ಬಸ್ಟರ್‌ಗಳಾದ 'ಕೆಜಿಎಫ್' ಮತ್ತು 'ಕಾಂತಾರ' ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಮುಂಬರುವ ಐದು ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ 3,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಗುರಿ ಹೊಂದಿದೆ.
ಹೊಂಬಾಳೆ ಫಿಲ್ಮ್ಸ್ ನ ಸಂಸ್ಥಾಪಕ ವಿಜಯ್ ಕಿರಗಂದೂರು ಮಾತನಾಡಿ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡಲು ಸಂಸ್ಥೆ ಮುಂದಾಗಿದೆ ಎಂದರು. ಭಾರತದಲ್ಲಿ ಮನರಂಜನಾ ಉದ್ಯಮದಲ್ಲಿ ಮುಂದಿನ ಐದು ವರ್ಷಗಳವರೆಗೆ 3,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ನಾವು ಉದ್ದೇಶಿಸಿದ್ದೇವೆ. ಮನರಂಜನಾ ಉದ್ಯಮವು ಹೆಚ್ಚು ಹೆಚ್ಚು ಬೆಳೆಯುತ್ತದೆ. ನಾವು ಎಲ್ಲಾ ದಕ್ಷಿಣ ಭಾಷೆಗಳಲ್ಲಿ ಚಲನಚಿತ್ರಗಳನ್ನು ಮಾಡಲು ಯೋಜಿಸಿದ್ದೇವೆ. ಸಾಂಸ್ಕೃತಿಕವಾಗಿ ಬೇರೂರಿರುವ ಕಥೆಗಳ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪುವುದು ಗುರಿ ಹೊಂದಿದ್ದೇವೆ ಎಂದರು.
ನಾವು ಜಾಗತಿಕ ಪ್ರೇಕ್ಷಕರಿಗೆ ಇಷ್ಟವಾಗುವಂತಹದನ್ನು ನಿರ್ಮಿಸಲು ಬಯಸುತ್ತೇವೆ. ಆದರೆ ಅದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಬೇರೂರಿರಬೇಕು. ನಾವು ಯುವ ಪೀಳಿಗೆಗೆ ಏನನ್ನಾದರೂ ಬಿಟ್ಟು ಹೋಗಲು ಬಯಸುತ್ತೇವೆ. ನಾವು ಭಾರತೀಯರಿಗೆ ಕೊಡುಗೆ ನೀಡಲು ಬಯಸುತ್ತೇವೆ ಎಂದರು.
ಬೆಂಗಳೂರು ಮೂಲದ ನಿರ್ಮಾಣ ಸಂಸ್ಧೆ ಹಿಂದಿ ಚಲನಚಿತ್ರೋದ್ಯಮದ ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕರೊಂದಿಗೆ ಕೈಜೋಡಿಸಲು ನಿರ್ಧರಿಸಿದೆ. ಇನ್ನು ಹೊಂಬಾಳೆ ಫಿಲ್ಮಂನ ಪಾಲುದಾರ ಚಲುವೇಗೌಡ ಅವರು ಬ್ಯಾನರ್‌ಗೆ ಚಲನಚಿತ್ರಗಳನ್ನು ಬರೆಯಲು ಇಬ್ಬರು ಪ್ರಮುಖ ಬಾಲಿವುಡ್ ಬರಹಗಾರರನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಆಸ್ಕರ್ ರೇಸ್ಗೆ ‘ಕಾಂತಾರ': ಅಧಿಕೃತಗೊಳಿಸಿದ ಹೊಂಬಾಳೆ ಪ್ರೊಡಕ್ಷನ್; ಕಾಂತಾರ-2 ಬಗ್ಗೆ ಹೊಸ ಅಪ್ ಡೇಟ್!
ಹಿಂದಿಯಲ್ಲಿ ಕೆಲವು ಬರಹಗಾರರ ಜೊತೆ ಕೆಲಸ ಮಾಡುತ್ತಿದ್ದೇವೆ. ಕಥೆ ಸಿದ್ಧವಾದ ನಂತರ ನಿರ್ದೇಶಕರನ್ನು ಹುಡುಕುತ್ತೇವೆ. ನಂತರ ನಟರನ್ನು ಆಯ್ಕೆ ಮಾಡುತ್ತೇವೆ. ಮೊದಲು ನಾವು ಬರಹಗಾರರತ್ತ ಗಮನ ಹರಿಸಿದ್ದೇವೆ ಎಂದರು. ಸಂಸ್ಥೆಯ ಮುಂಬರುವ ಚಿತ್ರ ಪ್ಯಾನ್-ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ಅನ್ನು ಒಳಗೊಂಡಿದೆ. ಇನ್ನು ಈ ಚಿತ್ರ ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಆ್ಯಕ್ಷನ್ ಚಿತ್ರವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಇದಲ್ಲದೆ ಬಹುಭಾಷಾ ಚಿತ್ರ 'ಧೂಮಮ್', ಕನ್ನಡ ಆಕ್ಷನ್ ಚಿತ್ರ 'ಬಘೀರಾ' ಮತ್ತು ತಮಿಳಿನ 'ರಘುತಾ' ಚಿತ್ರವನ್ನು ಸಂಸ್ಥೆ ನಿರ್ಮಿಸುತ್ತಿದೆ.
2013ರಲ್ಲಿ ಸ್ಥಾಪನೆಯಾದ ಹೊಂಬಾಳೆ ಫಿಲ್ಮ್ಸ್, 2018ರಲ್ಲಿ ಯಶ್ ಅಭಿನಯದ ಆಕ್ಷನ್ ಚಿತ್ರ 'ಕೆ.ಜಿ.ಎಫ್: ಅಧ್ಯಾಯ 1' ನೊಂದಿಗೆ ಪ್ಯಾನ್-ಇಂಡಿಯಾ ಯಶಸ್ಸನ್ನು ಗಳಿಸಿತ್ತು. ಈ ಸಂಸ್ಥೆ ನಿರ್ಮಿಸಿದ ಮೊದಲ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ 'ನೀನಿಂದಲೆ'. ಈ ವರ್ಷ ಬ್ಯಾನರ್ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 'ಕೆಜಿಎಫ್: ಅಧ್ಯಾಯ 2' ಮತ್ತು 'ಕಾಂತಾರ'ದೊಂದಿಗೆ ದೊಡ್ಡ ಯಶಸ್ಸನ್ನು ಕಂಡಿದೆ. ಎರಡೂ ಚಿತ್ರಗಳು ವಿಶ್ವಾದ್ಯಂತ 2,000 ಕೋಟಿ ರೂಪಾಯಿ ಗಳಿಸಿವೆ ಎಂದು ವರದಿಯಾಗಿದೆ.