'ಟೋಬಿ ಚಿತ್ರದಲ್ಲಿನ ಆನಂದ್ ಟಿಪಿಕಲ್ ವಿಲನ್ ಪಾತ್ರವಲ್ಲ': ಕನ್ನಡದ ನಟ ರಾಜ್ ದೀಪಕ್ ಶೆಟ್ಟಿ

ರಾಜ್ ದೀಪಕ್ ಶೆಟ್ಟಿ, 2005ರಿಂದಲೂ ಕನ್ನಡ ಚಿತ್ರರಂಗದಲ್ಲಿ ಪರಿಚಿತ ಹೆಸರು. ಸುಮಾರು 25 ಕನ್ನಡ ಚಲನಚಿತ್ರಗಳಲ್ಲಿ ಅವರು ನಟಿಸಿದ್ದು, ಇಸ್ಮಾರ್ಟ್ ಶಂಕರ್‌ ಸಿನಿಮಾದಲ್ಲಿ ಖಳನಾಯಕನ ಪಾತ್ರದ ಮೂಲಕ ತೆಲುಗಿನಲ್ಲಿ ಗುರುತಿಸಿಕೊಂಡರು. ಈಗ ಅವರು ರಾಜ್ ಬಿ ಶೆಟ್ಟಿ ಅವರ ಟೋಬಿ ಚಿತ್ರದಲ್ಲಿ ಖಳನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.
ರಾಜ್ ದೀಪಕ್ ಶೆಟ್ಟಿ - ರಾಜ್ ಬಿ ಶೆಟ್ಟಿ
ರಾಜ್ ದೀಪಕ್ ಶೆಟ್ಟಿ - ರಾಜ್ ಬಿ ಶೆಟ್ಟಿ

ರಾಜ್ ದೀಪಕ್ ಶೆಟ್ಟಿ, 2005ರಿಂದಲೂ ಕನ್ನಡ ಚಿತ್ರರಂಗದಲ್ಲಿ ಪರಿಚಿತ ಹೆಸರು. ದೂರದರ್ಶನದ ಮೂಲಕ ತಮ್ಮ ನಟನಾ ವೃತ್ತಿ ಆರಂಭಿಸಿದ ಅವರು ನಂತರ ಸಿನಿಮಾಗಳಲ್ಲಿ ನಟಿಸಿದರು. ಸುಮಾರು 25 ಕನ್ನಡ ಚಲನಚಿತ್ರಗಳಲ್ಲಿ ಅವರು ನಟಿಸಿದ್ದು, ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಕೆಲಸ ಮಾಡಿದರು. ಇಸ್ಮಾರ್ಟ್ ಶಂಕರ್‌ ಸಿನಿಮಾದಲ್ಲಿ ಖಳನಾಯಕನ ಪಾತ್ರದ ಮೂಲಕ ತೆಲುಗಿನಲ್ಲಿ ಗುರುತಿಸಿಕೊಂಡರು. ಈಗ ಅವರು ರಾಜ್ ಬಿ ಶೆಟ್ಟಿ ಅವರ ಟೋಬಿ ಚಿತ್ರದಲ್ಲಿ ಖಳನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

'ಕಳೆದ ಎರಡೂವರೆ ವರ್ಷಗಳಲ್ಲಿ, ನಾನು ತೆಲುಗಿನಲ್ಲಿ ಕೆಲವು ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಹೊರತುಪಡಿಸಿ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಕಾರಣ ನನಗೆ ಸರಿಯಾದ ಪಾತ್ರಗಳು ಸಿಗುತ್ತಿರಲಿಲ್ಲ. ನಾನು ಈ ಮೊದಲು ಅವಶ್ಯಕತೆಯಿಂದಾಗಿ ಯಾವುದೇ ಪಾತ್ರ ಬಂದರೂ ಒಪ್ಪಿಕೊಂಡಿದ್ದೇನೆ. ಆದರೆ, ಅವೆಲ್ಲವುಗಳಲ್ಲಿ ನಾನು ಒಂದೇ ರೀತಿ ಕಾಣುತ್ತೇನೆ. ಆದರೆ, ಟೋಬಿ ವಿಭಿನ್ನವಾಗಿತ್ತು. ಜೊತೆಗೆ, ಚಿತ್ರಕಥೆಯ ಹಿಂದೆ ರಾಜ್ ಬಿ ಶೆಟ್ಟಿ ಇದ್ದ ಕಾರಣ, ಈ ಯೋಜನೆಯನ್ನು ಒಪ್ಪಿಕೊಳ್ಳುವುದು ನನಗೆ ಸುಲಭದ ನಿರ್ಧಾರವಾಗಿತ್ತು' ಎನ್ನುತ್ತಾರೆ ರಾಜ್ ದೀಪಕ್.

ತಾನು ಸಾಮಾನ್ಯ ವಿಲನ್ ಆಗಿ ನಟಿಸುತ್ತಿಲ್ಲ ಮತ್ತು ಈ ಚಿತ್ರವು ಖಳನಾಯಕ ಎಂದರೆ ಹೀಗೆ ಎನ್ನುವುದನ್ನು ಬದಲಿಸಿದೆ. 'ನನ್ನ ಪಾತ್ರ ಆನಂದ್ ಎಂಬುದು ನಾಯಕನಿಗೆ ಪ್ರತಿಸ್ಪರ್ಧಿಯಾಗಿದ್ದರೂ, ಅದರಲ್ಲಿ ಸಾಕಷ್ಟು ಸಂಕೀರ್ಣತೆಗಳಿವೆ. ನಮ್ಮ ಜೀವನದಲ್ಲಿ ನಾವು ಎದುರಿಸಬಹುದಾದ ನಕಾರಾತ್ಮಕ ಛಾಯೆಯ ಪಾತ್ರವನ್ನು ಆತ ಪ್ರತಿನಿಧಿಸುತ್ತಾನೆ. ಕೂಗಾಟ ಅಥವಾ ಜಗಳವಾಡದೆ ತಾನು ಯಾವಾಗಲೂ ಸರಿ ಎಂದು ಆತ ಪ್ರಾಮಾಣಿಕವಾಗಿ ನಂಬುತ್ತಾನೆ; ಆತನ ಭಾವನೆಗಳು ಬಹಿರಂಗವಾಗಿರುವುದಿಲ್ಲ. ನನ್ನ ಅಭಿನಯದಲ್ಲಿ ನಾನು ಈ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗಿತ್ತು' ಎಂದು ಹೇಳುತ್ತಾರೆ.

ಅವರು ಪಾತ್ರಕ್ಕೆ ತರುತ್ತಿರುವ ಅನನ್ಯ ಆಯಾಮದ ಬಗ್ಗೆ ಪ್ರಶ್ನಿಸಿದಾಗ, 'ಟೋಬಿಯಂತಹ ಸಿನಿಮಾದಲ್ಲಿ ಹಿಂಸೆಯನ್ನು ಎದುರಿಸುವುದು ಸಾಮಾನ್ಯವಾಗಿದೆ. ಆದಾಗ್ಯೂ, ಆನಂದ್ ಹಿಂಸಾತ್ಮಕ ಕೃತ್ಯಗಳಲ್ಲಿ ನೇರ ಒಳಗೊಳ್ಳುವಿಕೆಯನ್ನು ಬದಿಗೊತ್ತಿ ಸಂಯೋಜಿತನಾಗಿರುತ್ತಾನೆ. ಆನಂದ್ ಸಾಮಾನ್ಯ ವಿಲನ್ ಅಲ್ಲ' ಎಂದು ಅವರು ಹೇಳುತ್ತಾರೆ.

ಈ ಪಾತ್ರವು ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ತಿರುವನ್ನು ನೀಡುತ್ತದೆಯೇ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸುವ ಅವರು, 'ಈ ಪಾತ್ರವನ್ನು ಒಪ್ಪಿಕೊಳ್ಳಲೆಂದೇ ನಾನು ಎರಡೂವರೆ ವರ್ಷಗಳ ಕಾಲ ಕಾಯುತ್ತಿದ್ದೆ ಮತ್ತು ಇದು ನನ್ನ ತಾಳ್ಮೆಗೆ ಒಂದು ಸಾರ್ಥಕತೆ ಸಿಕ್ಕಿದಂತೆ ಭಾಸವಾಯಿತು. ನಟನಾಗಿ 18 ವರ್ಷಗಳ ಅನುಭವದೊಂದಿಗೆ, ಟೋಬಿಯಲ್ಲಿ ಈ ಪಾತ್ರವನ್ನು ನಿರ್ವಹಿಸುವುದು ನನಗೆ ಹೆಚ್ಚು ತೃಪ್ತಿ ನೀಡಿತು ಮತ್ತು ಇದು ಕೇವಲ ವೃತ್ತಿಜೀವನದ ಹೊಸ ತಿರುವು ಎನ್ನುವುದಕ್ಕಿಂತಲೂ ಹೆಚ್ಚು. ಇದು ಕಥೆ ಹೇಳುವ ವಿಶಿಷ್ಟ ಶೈಲಿಯೊಂದಿಗೆ ಒಂದು ವಿಶಿಷ್ಟ ಪ್ರಕಾರವಾಗಿದೆ. ಟೋಬಿ ಮೂಲಕ, ನಾನು ಹೊಸ ದೃಷ್ಟಿಕೋನಗಳನ್ನು ಕಲಿತಿದ್ದೇನೆ ಮತ್ತು ಪಡೆದುಕೊಂಡಿದ್ದೇನೆ. ಸಿನಿಮಾದ ಬಗ್ಗೆ ನನ್ನ ದೃಷ್ಟಿಕೋನವನ್ನು ಈ ಚಿತ್ರ ಮರುರೂಪಿಸಿದೆ’ ಎಂದು ಅವರು ಮಾತು ಮುಗಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com