
ಟಿವಿಎಫ್ ಮೋಷನ್ ಪಿಕ್ಚರ್ಸ್ ಸಹಯೋಗದೊಂದಿಗೆ ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸುತ್ತಿರುವ 'ಪೌಡರ್' ಸಿನಿಮಾಗೆ ವರಮಹಾಲಕ್ಷ್ಮಿ ಹಬ್ಬದಂದು ಅದ್ಧೂರಿ ಚಾಲನೆ ದೊರೆತಿದೆ. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಗುಳ್ಟು ಸಿನಿಮಾ ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದಲ್ಲಿ ಬರುತ್ತಿರುವ 'ಪೌಡರ್' ಸಿನಿಮಾ ಬಹುತಾರಾಗಣವನ್ನು ಹೊಂದಿದ್ದು, ನಟ ದಿಗಂತ್, ಶರ್ಮಿಳಾ ಮಾಂಡ್ರೆ, ಧನ್ಯಾ ರಾಮ್‌ಕುಮಾರ್, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್ ಮತ್ತು ರವಿಶಂಕರ್ ಗೌಡ ನಟಿಸಿದ್ದಾರೆ.
ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ನಿರ್ದೇಶಕರ ಪ್ರಕಾರ, 'ಪೌಡರ್ ಒಂದು ಸಣ್ಣ ಹಳ್ಳಿಯಲ್ಲಿ ನಡೆಯುವ ಲಘು ಹಾಸ್ಯ ಮತ್ತು ಅಮೂಲ್ಯವಾದ ನಿಧಿಯನ್ನು ಅನ್ವೇಷಿಸುವ ದುಷ್ಕರ್ಮಿಗಳ ಗುಂಪಿನ ಸುತ್ತ ಸುತ್ತುತ್ತದೆ. ಈ ಚಿತ್ರವು ತನ್ನ ಆಕರ್ಷಕ ಮತ್ತು ಮನರಂಜನೆ ಮೂಲಕ ಕಥೆ ಹೇಳುತ್ತಾ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸುತ್ತದೆ' ಎನ್ನುತ್ತಾರೆ.
ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಇತ್ತೀಚೆಗಷ್ಟೆ ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಒಪ್ಪಂದ ಮಾಡಿಕೊಂಡಿವೆ. ಈ ಎರಡು ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ‘ಪೌಡರ್’.
2024ರ ಏಪ್ರಿಲ್ 5ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದು ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಈಗಾಗಲೇ ಮಾಹಿತಿ ನೀಡಿದ್ದಾರೆ. ಶಾಂತಿ ಸಾಗರ್ ಅವರ ಛಾಯಾಗ್ರಹಣದೊಂದಿಗೆ, ತಮಿಳು ಸಂಗೀತ ಸಂಯೋಜಕ ಸೀನ್ ರೋಲ್ಡನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
Advertisement