ನಟ ಶಿವರಾಜಕುಮಾರ್ ಮತ್ತು ಪ್ರಭುದೇವ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿರುವ “ಕರಟಕ ದಮನಕ’ ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.
ಈಗಾಗಲೇ “ಕರಟಕ ದಮನಕ’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಅಂತಿಮ ಹಂತದಲ್ಲಿ ಸಿನಿಮಾದ ಹಾಡುಗಳನ್ನು ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದೆ. ಹಾಡಿಗೆ ಹೆಜ್ಜೆಹಾಕಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವಾ ಸಜ್ಜಾಗಿದ್ದಾರೆ.
ಈಗಾಗಲೇ ರಾಕ್‌ಲೈನ್ ಸ್ಟುಡಿಯೋದಲ್ಲಿ ಬೃಹತ್ ಸೆಟ್‌ಗಳನ್ನು ಹಾಕಲಾಗಿದ್ದು, ಸುಮಾರು 100 ನೃತ್ಯಗಾರರು ಮತ್ತು ಆಯ್ದ ಕಲಾವಿದರೊಂದಿಗೆ ನೃತ್ಯ ಸಂಯೋಜನೆಗೆ ಭೂಷಣ್ ಮಾಸ್ಟರ್ ಕೂಡ ಸಜ್ಜಾಗಿದ್ದಾರೆ.
ವಿ ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡಿಗೆ ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಅವರು ಹೆಜ್ಜೆ ಹಾಕುತ್ತಿದ್ದು, ಹಾಡಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ.
ತಮ್ಮ ಹೋಮ್ ಬ್ಯಾನರ್‌ನಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಕುರಿತು ಈ ಹಿಂದೆ ಮಾಹಿತಿ ನೀಡಿದ್ದ ಚಿತ್ರ ತಂಡ “ಕರಟಕ ದಮನಕ’ ಎನ್ನುವುದು “ಪಂಚತಂತ್ರ’ ಕಥೆಗಳಲ್ಲಿ ಬರುವ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಇಬ್ಬರು ಒಟ್ಟಿಗೆ ಇರುವುದನ್ನು ನೋಡಿದಾಗ ಅವರನ್ನು “ಕರಟಕ ದಮನಕ’ ಎನ್ನುವುದು ಉಂಟು. ಈ ಸಿನಿಮಾದಲ್ಲಿ ಶಿವಣ್ಣ “ಕರಟಕ’ ಹಾಗೂ ಪ್ರಭುದೇವ “ದಮನಕ’ ಪಾತ್ರಗಳನ್ನು ಮಾಡಿದ್ದಾರೆ ಎಂದು ಹೇಳಿತ್ತು.
ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರಾಗಿದ್ದು, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಏತನ್ಮಧ್ಯೆ, ರಾಕ್‌ಲೈನ್ ವೆಂಕಟೇಶ್ ಅವರ ಮತ್ತೊಂದು ಬಿಗ್ ಸಿನಿಮಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕ ನಟರಾಗಿ ಅಭಿನಯಿಸಿರುವ ಕಾಟೇರ ಚಿತ್ರ ಡಿಸೆಂಬರ್ 29ರಂದು ಬಿಡುಗಡೆಗೆ ಸಜ್ಜಾಗಿದೆ.
Advertisement