ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಇದೇ ಶುಕ್ರವಾರ ರಾಜ್ಯದಾದ್ಯಂತ ತೆರೆಕಾಣಲಿದ್ದು, ನಟ ದರ್ಶನ್ ಇದೀಗ ಇತರೆ ಆಸಕ್ತಿದಾಯಕ ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಸಿನಿಮಾವನ್ನು ಪ್ರಕಾಶ್ ವೀರ್ ನಿರ್ದೇಶಿಸಲಿದ್ದು, ಇದರ ಶೂಟಿಂಗ್ 2024ರ ಆರಂಭದಲ್ಲಿ ಪ್ರಾರಂಭವಾಗಲಿದೆ.
ನಿರ್ದೇಶಕ ಪ್ರೇಮ್ ಜೊತೆಗೆ ನಟ ದರ್ಶನ್ ಸಿನಿಮಾ ಮಾಡುತ್ತಾರೆ ಎನ್ನುವುದು ಇದೀಗ ವ್ಯಾಪಕ ನಿರೀಕ್ಷೆಯನ್ನು ಹುಟ್ಟುಹಾಕುತ್ತಿದೆ. ಸದ್ಯ ಇತರೆ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿರುವ ನಿರ್ದೇಶಕರು, ಅತಿಥಿ ಪಾತ್ರಕ್ಕಾಗಿ ತೆಲುಗಿನ ಸೂಪರ್‌ಸ್ಟಾರ್ ಚಿರಂಜೀವಿ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಪ್ರೇಮ್ ಅವರು ಚಿರಂಜೀವಿ ಅವರನ್ನು ಭೇಟಿ ಮಾಡಿ, ಚಿತ್ರದ ಕಥೆಯನ್ನು ಹೇಳಿದ್ದು, ಇದೀಗ ಚಿರಂಜೀವಿ ಅವರ ನಿರ್ಧಾರವಷ್ಟೇ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಚಿರಂಜೀವಿ ಅವರು ಚಿತ್ರತಂಡ ಸೇರಿಕೊಂಡರೆ 22 ವರ್ಷಗಳ ನಂತರ ಅವರು ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿಪಾಯಿ ಸಿನಿಮಾದಲ್ಲಿ ಚಿರಂಜೀವಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸಾರ್ವಕಾಲಿಕ ಹಿಟ್ ಹಾಡುಗಳಲ್ಲಿ ಒಂದಾದ, ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎಂಬ ಶೀರ್ಷಿಕೆಯ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರೇಮ್ ಮತ್ತು ದರ್ಶನ್ ನಡುವಿನ ಸಹಯೋಗವು ಈಗಾಗಲೇ ಸಿನಿ ಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಈ ಇಬ್ಬರ ಕಾಂಬಿನೇಷನ್‌ನಲ್ಲಿ ಕರಿಯಾ ಚಿತ್ರ ಹಿಟ್ ಆಗಿತ್ತು. ಸದ್ಯ, ಪ್ರೇಮ್ ಧ್ರುವ ಸರ್ಜಾ ಅಭಿನಯದ ಬಹುಭಾಷಾ ಪ್ರಾಜೆಕ್ಟ್ ಕೆಡಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
Advertisement