ಎಲ್ಲದಕ್ಕೂ ಒಂದು ಸರಿಯಾದ ಸಮಯವಿರುತ್ತದೆ: ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಟಿ ನಯನತಾರಾ

ಭಾರತೀಯ ಚಲನಚಿತ್ರೋದ್ಯಮದ ಬದಲಾಗುತ್ತಿರುವ ಕಾರ್ಯದೊಂದಿಗೆ, ಕಲಾವಿದರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು 'ಸರಿಯಾದ ಸಮಯ' ಇರುತ್ತದೆ ಎಂದು ನಂಬುತ್ತಾರೆ ಲೇಡಿ ಸೂಪರ್‌ಸ್ಟಾರ್ ನಯನತಾರಾ.
ನಯನತಾರಾ
ನಯನತಾರಾ

ಮುಂಬೈ: ಭಾರತೀಯ ಚಲನಚಿತ್ರೋದ್ಯಮದ ಬದಲಾಗುತ್ತಿರುವ ಕಾರ್ಯದೊಂದಿಗೆ, ಕಲಾವಿದರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು 'ಸರಿಯಾದ ಸಮಯ' ಇರುತ್ತದೆ ಎಂದು ನಂಬುತ್ತಾರೆ ಲೇಡಿ ಸೂಪರ್‌ಸ್ಟಾರ್ ನಯನತಾರಾ.

ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾದ 38 ವರ್ಷದ ನಟಿ, ಅವರ ಇತ್ತೀಚಿನ ತಮಿಳಿನ ಹಾರರ್ ಸಿನಿಮಾ 'ಕನೆಕ್ಟ್' ಬಿಡುಗಡೆಯೊಂದಿಗೆ ಹಿಂದಿ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ. ಈ ಸಿನಿಮಾವನ್ನು ಅವರು ತಮ್ಮ ಬ್ಯಾನರ್ ರೌಡಿ ಪಿಕ್ಚರ್ಸ್ ಮೂಲಕ ನಿರ್ಮಿಸಿದ್ದಾರೆ.

ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದೊಂದಿಗೆ ನಯನತಾರಾ ಅವರು ಹಿಂದಿ ಸಿನಿಮಾವೊಂದರಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

'ಈ ಬದಲಾವಣೆಯು (ಸಿನಿಮಾ ರಂಗದ ಓಟ) ಎಲ್ಲರಿಗೂ ಆತ್ಮವಿಶ್ವಾಸವನ್ನು ನೀಡಿದೆ. ಜನರಿಗೆ ನಕ್ಷತ್ರ ಅಥವಾ ನಿರ್ದೇಶಕರ ಬಗ್ಗೆ ಅಷ್ಟೊಂದು ಅರಿವಿಲ್ಲದಿದ್ದರೂ ನಮ್ಮ ಚಲನಚಿತ್ರಗಳನ್ನು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡುವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನಮ್ಮನ್ನು ಪ್ರೇರೇಪಿಸಿದೆ' ಎಂದು ನಯನತಾರಾ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ವರ್ಚುವಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ನಟಿ ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ, ಚಿತ್ರರಂಗಕ್ಕೆ ಬಂದು 21 ವರ್ಷಗಳೇ ಕಳೆದಿದ್ದರೂ ಈವರೆಗೂ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ.

'RRR', 'ಪುಷ್ಪ' ಮತ್ತು 'ಕೆಜಿಎಫ್' ಫ್ರಾಂಚೈಸಿಗಳ ಯಶಸ್ಸು ಆಕೆಗೆ ಹಿಂದಿ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಸೃಷ್ಟಿಸಿದೆ. ಅವರು ಜನಪ್ರಿಯ ಹಿಟ್ ಸಿನಿಮಾಗಳಾದ 'ಆಧವನ್', 'ಚಂದ್ರಮುಖಿ', 'ತುಳಸಿ', 'ಆರಂಭಂ' ಮತ್ತು 'ಶಿವಾಜಿ' ಸಿನಿಮಾಗಳ ಡಬ್ಬಿಂಗ್ ಆವೃತ್ತಿಯಲ್ಲಿ ಹಿಂದಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

'ಎಲ್ಲದಕ್ಕೂ ಸರಿಯಾದ ಸಮಯ ಇರುತ್ತದೆ. ಪೂರ್ಣಪ್ರಮಾಣದ ಹಿಂದಿ ಚಿತ್ರವನ್ನಾಗಲಿ ಅಥವಾ ಸರಿಯಾದ ಡಬ್ಬಿಂಗ್ ಹಿಂದಿ ಸಿನಿಮಾವನ್ನಾಗಲಿ ಮಾಡುವ ಅವಕಾಶ ನನಗೆ ಸಿಕ್ಕಿರಲಿಲ್ಲ ಅಷ್ಟೇ. ಅಲ್ಲದೆ, ಹಿಂದಿನ ಪರಿಸ್ಥಿತಿಗಳು ವಿಭಿನ್ನವಾಗಿದ್ದವು. ಇಂದು ಅದು ಬದಲಾಗಿದೆ ಮತ್ತು ನಾವು ಪರಿಸ್ಥಿತಿಗೆ ಅನುಗುಣವಾಗಿ ಚಲಿಸಬೇಕಾಗಿದೆ' ಎಂದು ಅವರು ಹೇಳಿದರು.

ಕಂಟೆಂಟ್ ಉತ್ತಮವಾಗಿರುವ ಚಿತ್ರವು ಅದರ ಭಾಷೆಯನ್ನು ಲೆಕ್ಕಿಸದೆ ದೇಶ ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳುತ್ತಾರೆ ನಯನತಾರಾ.

ತಮಿಳು, ತೆಲುಗು, ಮಲಯಾಳಂ, ಕನ್ನಡ ಅಥವಾ ಹಿಂದಿ ಭಾಷೆಯಲ್ಲಿದ್ದರೂ ಜನರು ಒಳ್ಳೆಯ ಚಿತ್ರವನ್ನು ವೀಕ್ಷಿಸಿದರೆ, ಅವರು ಸಂತೋಷಪಡುತ್ತಾರೆ ಮತ್ತು ಕನೆಕ್ಟ್ ಆಗುತ್ತಾರೆ ಎಂದು ನಾನು ನಂಬುತ್ತೇನೆ. ಕಂಟೆಂಟ್ ಚೆನ್ನಾಗಿದ್ದರೆ ಎಲ್ಲೆಡೆ ಕೆಲಸ ಮಾಡುತ್ತದೆ. 'ಮಾಯಾ' ಮತ್ತು 'ಗೇಮ್ ಓವರ್' ಖ್ಯಾತಿಯ ಅಶ್ವಿನ್ ಸರವಣನ್ ನಿರ್ದೇಶನದ 'ಕನೆಕ್ಟ್' ಹಿಂದಿ ಪ್ರೇಕ್ಷಕರನ್ನು ಆಕರ್ಷಿಸಲು ಸರಿಯಾದ ಅಂಶಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಕನೆಕ್ಟ್' ಎನ್ನುವುದು ತಮಿಳುನಾಡಿನ ಒಂದು ಪ್ರದೇಶ ಅಥವಾ ಕುಟುಂಬಕ್ಕೆ ಸಂಬಂಧಿಸಿದ್ದಲ್ಲ. ಇದು ನಿರ್ದಿಷ್ಟ ರಾಜ್ಯವಲ್ಲ ಮತ್ತು ಈ ಚಿತ್ರಕ್ಕೆ ಭಾಷೆಯ ತಡೆಗೋಡೆ ಇರಬಾರದು ಎಂದು ನಾನು ಭಾವಿಸುತ್ತೇನೆ ಎಂದು ನಟಿ ಹೇಳುತ್ತಾರೆ.

ದೇಶದಲ್ಲಿನ ಲಾಕ್‌ಡೌನ್‌ ಸಮಯದಲ್ಲಿ ನಡೆಯುವ ಕಥೆಯನ್ನು ಹೊಂದಿರುವ ಸಿನಿಮಾದಲ್ಲಿ, ಒಂಟಿ ತಾಯಿಯೊಬ್ಬರ ಕಥೆಯನ್ನು ಒಳಗೊಂಡಿದೆ. ಅವರು ತಮ್ಮ ಮಗಳ ನಡವಳಿಕೆಯಲ್ಲಿನ ವಿಲಕ್ಷಣ ಬದಲಾವಣೆಗಳನ್ನು ಗಮನಿಸಲು ಪ್ರಾರಂಭಿಸುತ್ತಾರೆ. ಇದುವೇ ಕನೆಕ್ಟ್ ಚಿತ್ರದ ತಿರುಳು.

ತಮಿಳು ಆವೃತ್ತಿಯು ಡಿಸೆಂಬರ್ 22 ರಂದು ಬಿಡುಗಡೆಯಾಗಿದ್ದರೆ, ಹಿಂದಿ ಆವೃತ್ತಿಯು ಗುರುವಾರ (ಡಿ.29) ಹೊರಬಂದಿದೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ನಟಿ ಸಂತಸಗೊಂಡಿದ್ದಾರೆ.

'ಕನೆಕ್ಟ್' ಒಂದು ಥಿಯೇಟರ್ ಅನುಭವವಾಗಿದೆ ಮತ್ತು ದೊಡ್ಡ ಪರದೆಯ ಮೇಲೆ ಹಾರರ್ ಸಿನಿಮಾವನ್ನು ನೋಡುವ ಥ್ರಿಲ್ ಅನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ. ಆದರೆ, ಯಶಸ್ಸಿನೊಂದಿಗೆ ಜವಾಬ್ದಾರಿಯೂ ಬರುತ್ತದೆ ಮತ್ತು ದಕ್ಷಿಣ ಚಿತ್ರರಂಗವು ತನಗೆ ತಾನೇ ಮಾಡಿಕೊಂಡಿರುವ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಾವು ಸಾಕಷ್ಟು ಯೋಗ್ಯವಾದ ಸಿನಿಮಾಗಳನ್ನು ಮಾಡಬೇಕೇ ಹೊರತು ಮೂರ್ಖತನದ ಸಿನಿಮಾಗಳನ್ನಲ್ಲ ಎಂಬ ಜವಾಬ್ದಾರಿಯ ಭಾವನೆಯು ನಮಗೆ ಸಿಗುತ್ತದೆ' ಎಂದು ನಯನತಾರಾ ಹೇಳಿದರು.

ಕನೆಕ್ಟ್ ಸಿನಿಮಾ ನಯನತಾರಾ ಅವರ 50ನೇ ಸಿನಿಮಾವಾದ 2015ರ ಹಾರರ್ ಸಿನಿಮಾ 'ಮಾಯಾ' ನಂತರ ನಿರ್ದೇಶಕ ಸರವಣನ್ ಅವರೊಂದಿಗಿನ ಅವರ ಎರಡನೇ ಚಿತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com