ಬಿಡಿಗಾಸಿಲ್ಲದೆಯೂ ಬಿಗ್‌ ಬಜೆಟ್‌ ಸಿನಿಮಾ ಮಾಡುವುದ್ಹೇಗೆ?; ಸುದೀಪ್ ಮೇಲಿನ ಆರೋಪಗಳ ಹಿಂದೆ ಸೂರಪ್ಪ ಬಾಬು ಕೈವಾಡ?

ಸುದೀಪ್ ನನಗೆ ಹಣ ಕೊಡಬೇಕು ಅಂತ ಕುಮಾರ್‌ ಆರೋಪ ಮಾಡಿದರು. ಆದರೆ ಅದಕ್ಕೆ ಯಾವುದೇ ಸಾಕ್ಷಿಯಿಲ್ಲ ನಮ್ಮ ಮನಸಾಕ್ಷಿಯೇ ಸಾಕ್ಷಿ. ಈ ಮನಸಾಕ್ಷಿ, ವನಜಾಕ್ಷಿ, ಮೀನಾಕ್ಷಿಯನ್ನಿಟ್ಟುಕೊಂಡು ವ್ಯವಹಾರ ಮಾಡೋದನ್ನು ಗಾಂಧಿನಗರದವರು ಎಲ್ಲಿಂದ ಕಲಿತರು ಅಂತ?
ಸುದೀಪ್ ಮತ್ತು ಸೂರಪ್ಪ ಬಾಬು
ಸುದೀಪ್ ಮತ್ತು ಸೂರಪ್ಪ ಬಾಬು

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ನಟ ಸುದೀಪ್‌ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಮೊದಲು ನಿರ್ಮಾಪಕ ಎನ್‌.ಕುಮಾರ್‌ ಅಡ್ವಾನ್ಸ್‌ ತಗೊಂಡು ಸಿನಿಮಾ ಮಾಡಲಿಲ್ಲ. ನನ್ನ ಹಣ ವಾಪಸ್‌ ಕೊಡಿಸಿ ಎಂದು ಮನವಿ ಮಾಡಿದ್ದರು. ಸುದೀಪ್  ನಟನೆಯ ‘ಕೋಟಿಗೊಬ್ಬ 2’ ಹಾಗೂ ‘ಕೋಟಿಗೊಬ್ಬ 3’ ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದರು. ಅಚ್ಚರಿಯ ವಿಷಯ ಎಂದರೆ ಸುದೀಪ್ ವಿರುದ್ಧ ಎಂಎನ್​ ಕುಮಾರ್, ರೆಹಮಾನ್​ ಸಿಡಿದೇಳಲು ಸೂರಪ್ಪ ಬಾಬು ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

ವೀರಕಪುತ್ರ ಶ್ರೀನಿವಾಸ ಅವರು ಈ ರೀತಿಯ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು, ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕೆಲದಿನಗಳ ಹಿಂದೆ ಸುದೀಪ್‌ ಕುರಿತು ತುಂಬಾ ಮಾತುಗಳು ಕೇಳಿ ಬರುತ್ತಿವೆ. ಅವರು ಪ್ರೊಡ್ಯೂಸರ್‌ಗೆ ದುಡ್ಡು ಕೊಡಬೇಕಂತೆ. ಕಾಲ್‌ ಶೀಟ್‌ ಕೊಟ್ಟಲ್ಲವಂತೆ, ಆದ್ರೆ ಇದಕ್ಕೆ ಸಾಕ್ಷಿ ಮಾತ್ರ ಇಲ್ಲವಂತೆ. ಈ ಪ್ರಕರಣದ ಬೆಳವಣಿಗೆಗಳನ್ನು ಒಂದು ವಾರದಿಂದ ಗಮನಿಸುತ್ತಿದ್ದೇನೆ. ಇದೊಂದು ಹಣದ ವಿಷಯವಾಗಿ ಮಾತ್ರ ಉಳಿದಿದೆ ಅಂತ ನನಗನ್ನಿಸುತ್ತಿಲ್ಲ. ಈ ಪ್ರಕರಣ ಮಾನಹರಣಕ್ಕೆ ಮಾತ್ರ ಮೀಸಲಾಗಿರುವುದು ಸ್ಪಷ್ಟವಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.

"ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ತಂದು ಕೊಟ್ಟ ನಟನ ವಿರುದ್ದ ಇಷ್ಟೆಲ್ಲಾ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ" ಎಂದು ವೀರಕಪುತ್ರ ಶ್ರೀನಿವಾಸ ಅಭಿಪ್ರಾಯಪಟ್ಟಿದ್ದಾರೆ. "ಹಾಗಂತ ಸುದೀಪ್‌ ಪ್ರಶ್ನಾತೀತರಲ್ಲ. ತಪ್ಪು ಮಾಡಿದಾಗ ಅವರನ್ನೂ ಪ್ರಶ್ನಿಸಬೇಕು. ಆದ್ರೆ ಪ್ರಶ್ನಿಸುತ್ತಿರುವವರ ಅಸಲಿಯತ್ತು, ಪ್ರಮಾಣಿಕತೆಯನ್ನು ಓರೆಗೆ ಹಚ್ಚಬೇಕಿದೆ. ಅಂತಹ ಕೆಲವು ಸಂಗತಿಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ನಾನ್ಯಾಕೆ ಹಂಚಿಕೊಳ್ಳಬೇಕು ಅಂದ್ರೆ ಸುದೀಪ್‌ ಸರ್‌ ಅವ್ರ ಜೊತೆ ಮಾತ್ರವಲ್ಲ ಈ ಆರೋಪಗಳನ್ನು ಮಾಡುತ್ತಿರುವ ಇಬ್ಬರು ನಿರ್ಮಾಪಕರ ಜೊತೆಗೂ ನನಗೆ ಅಷ್ಟೇ ಒಡನಾಟವಿದೆ. ಆದ್ದರಿಂದ ಈ ಮಾತುಗಳನ್ನು ನಾನು ಹೇಳಲೇಬೇಕು" ಎಂದು ಬರೆದಿದ್ದಾರೆ.

"ಸುದೀಪ್ ನನಗೆ ಹಣ ಕೊಡಬೇಕು ಅಂತ ಕುಮಾರ್‌ ಆರೋಪ ಮಾಡಿದರು. ಆದರೆ ಅದಕ್ಕೆ ಯಾವುದೇ ಸಾಕ್ಷಿಯಿಲ್ಲ ನಮ್ಮ ಮನಸಾಕ್ಷಿಯೇ ಸಾಕ್ಷಿ. ಈ ಮನಸಾಕ್ಷಿ,  ವನಜಾಕ್ಷಿ, ಮೀನಾಕ್ಷಿಯನ್ನಿಟ್ಟುಕೊಂಡು ವ್ಯವಹಾರ ಮಾಡೋದನ್ನು ಗಾಂಧಿನಗರದವರು ಎಲ್ಲಿಂದ ಕಲಿತರು ಅಂತ? ನಮ್ಮ ಹಳ್ಳಿಗಳಲ್ಲಿ ಅಂಗಡಿಗೆ ಹೋಗಿ ಕಾಫಿಪುಡಿ ಸಾಲದ ರೂಪದಲ್ಲಿ ತಂದ್ರೂ ಅದನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಾನೆ. ಅಂತಹುದರಲ್ಲಿ ಕುಮಾರ್‌ ಅವ್ರು ಅಷ್ಟು ದೊಡ್ಡ ಮೊತ್ತವನ್ನು ಏನೂ ದಾಖಲೆಗಳಿಲ್ಲದೆ ಕೊಟ್ಟರೆಂದರೆ ಯಾರಾದ್ರೂ ನಂಬಬಹುದೇ? ಯಾಕೆ ನಂಬಬೇಕು? ಅವರ ಬಳಿ ಅಷ್ಟೊಂದು ಹಣ ಇದೆಯಾ? ಮುಂದುವರಿದು ಅವ್ರು ಹೇಳ್ತಾರೆ.. ನನಗೆ ಹಣ ಬೇಡ ಆದ್ರೆ ಕಾಲ್ ಶೀಟ್ ಕೊಡಿ ಅಂತ. ಇತ್ತ ಕಡೆ ಆರೋಪ ಮಾಡುತ್ತಲೇ, ಅತ್ತ ಕಡೆ ಅವಕಾಶ ಕೇಳುತ್ತಿರುವ ಒಂದು ಕೆಟ್ಟ ವಿದ್ಯಮಾನವಾಗಿ ಕರ್ನಾಟಕ ಚಲನಚಿತ್ರ ಇತಿಹಾಸದಲ್ಲಿ ಇದು ದಾಖಲಾಗಿ ಉಳಿಯಲಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಾನು ಕುಮಾರ್‌ ಅವರಿಗಾಗಲಿ, ಇತರೆ ನಿರ್ಮಾಪಕರಿಗಾಗಲಿ ಹೇಳಲು ಬಯಸುವುದೇನೆಂದರೆ, ನಿಮಗೆ ಕಾಲ್ ಶೀಟ್‌ ಯಾಕೆ ಕೊಡಬೇಕು? ಸ್ನೇಹಿತರು ಅಂತಾ ಹೇಳಿ ಕೊಡಬೇಕೆ? ನಿಮ್ಮೆಲ್ಲರ ಬಹುದೊಡ್ಡ ಸಮಸ್ಯೆ ಏನೆಂದರೆ, ಸುದೀಪ್‌ ಏನೂ ಇಲ್ಲದೇ ಇದ್ದಾಗ ನಾವು ಜೊತೆಗಿದ್ವಿ, ಈಗ ಆತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾರೆ ಅನ್ನೋದು. ಆದ್ದರಿಂದ ನಾವು ಕಷ್ಟಕ್ಕೆ ಸಿಕ್ಕಿಕೊಂಡಾಗಲೆಲ್ಲಾ ಸುದೀಪ್‌ ಸಹಾಯ ಹಸ್ತ ಚಾಚುತ್ತಿರಬೇಕು. ಇದೆಂತಾ ನ್ಯಾಯ ಸ್ವಾಮಿ.. ಮೋದಿಯವರು ಕೂಡ ಟೀ ಮಾರುತ್ತಿದ್ರು ಹಾಗಂತ ಅವ್ರನ್ನು ಈಗಲೂ ಟೀ ಅಂಗಡಿಯಲ್ಲೇ ಕೂತಿರಿ ಅಂತ ಹೇಳೋಕಾಗುತ್ತಾ?  ನಿಮ್ಮಂತಹ ಸ್ನೇಹಿತರನ್ನು ನಂಬಿಕೊಂಡು ಸುದೀಪ್ ಅವ್ರು ಮಾಡಿದ ಸಿನಿಮಾಗಳೆಷ್ಟು ಅಂತ ಒಂದ್ಸಲ ಲೆಕ್ಕಮಾಡಿ ನೋಡಿ... ಮತ್ತು ಅವುಗಳು ಬಿಡುಗಡೆ‌ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳು ಎಷ್ಟು ಎಂತಹವು ಗೊತ್ತಾ..? ರನ್ನ ಸಿನಿಮಾ ಬಿಡುಗಡೆ ಮುನ್ನಾ ದಿನ ಎಂಥಾ ಇಕ್ಕಟ್ಟಿಗೆ ಸಿಕ್ಕಿಕೊಂಡಿತು? ಕೋಟಿಗೊಬ್ಬ 3 ಬಿಡುಗಡೆಯೇ ಆಗಲಿಲ್ಲ... ಇದಕ್ಕೆಲ್ಲಾ ಕಾರಣ ಯಾರು? ಅದೇ ಸ್ನೇಹಿತರಲ್ಲವೇ..." ಎಂದು ಬರೆದಿದ್ದಾರೆ.

"ಸುದೀಪ್‌ ಅವರಿಗೆ ಸಿನಿಮಾ ಮಾಡಲು ಬರುವ ಬಹುತೇಕ ನಿರ್ಮಾಪಕರ ಬಳಿ ಒಂದು ರೂಪಾಯಿ ಹಣ ಕೂಡ ಇರಲ್ಲ. ಅದಕ್ಕಿಂತ ಪ್ರಮುಖ ಸಂಗತಿ ಏನೆಂದರೆ.. ಸಿನಿಮಾ ಮಾಡದಿದ್ದರೆ,  ಇವರುಗಳ ಬ್ಯಾಂಕ್ ಬ್ಯಾಲೆನ್ಸ್‌ ನಮ್ಮ ಬ್ಯಾಂಕ್ ಬ್ಯಾಲೆನ್ಸ್‌ಮಷ್ಟು ಸಹ ಇರಲ್ಲ. ಆದರೂ ನಾವು ಇಂತಹ ಸಿನಿಮಾ ಮಾಡೋಕೆ ಅಗಲ್ಲ ಆದ್ರೆ ಇವ್ರು ಹೇಗೆ ಬಿಗ್ ಬಜೆಟ್ ಸಿನಿಮಾ ಮಾಡ್ತಾರೆ? ಸಿಂಪಲ್… ಸುದೀಪ್ ಅವ್ರಂತಹ ಸ್ಟಾರ್‌ಗಳ ಕಾಲ್ ಶೀಟ್ ಇವರಿಗೆ ಕೋಟ್ಯಾಂತರ ರೂಪಾಯಿಗಳ ಫಂಡಿಂಗ್ ಸಿಗುವಂತೆ ಮಾಡುತ್ತದೆ. ಸುದೀಪ್‌ ಸರ್‌ ಕಾಲ್ ಶೀಟ್‌ ಗ್ಯಾರಂಟಿ ಆದ್ಮೇಲೆ,  ಇವರು ಫೈನಾನ್ಸಿಯರ್‌ಗಳ ಹತ್ತಿರ ಹೋಗಿ ಇಪ್ಪತ್ತೋ ಮೂವತ್ತೋ ಕೋಟಿ ಹಣವನ್ನು ಬಡ್ಡಿಗೆ ತರುತ್ತಾರೆ. ಆ ಬಡ್ಡಿ ಬ್ಯಾಂಕ್‌ ಬಡ್ಡಿ ಅಲ್ಲ ಗಾಂಧಿನಗರದ ಬಡ್ಡಿ! ಆಟೋಮೀಟರ್‌ ಸ್ಪೀಡಲ್ಲಿ ಓಡುತ್ತಿರುತ್ತೆ. ಆ ಬಡ್ಡಿಗೆ ತಂದ ಹಣದಲ್ಲಿ ಮೊದಲು ಇವರ ಸಾಲಗಳನ್ನು ತೀರಿಸಿಕೊಳ್ಳುತ್ತಾರೆ. ಆಮೇಲೆ ಒಂದು ಮನೆ ಕಟ್ಟಿಸಿಕೊಳ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಅನುಕೂಲ ಮಾಡಿಕೊಳ್ತಾರೆ. ಇವರ ಶೋಕಿ, ಬಾಕಿ ಎಲ್ಲವೂ ಅದರಿಂದಲೇ ತೀರುತ್ತೆ. ಕೊನೆಗೆ… ಅವರಿಗೆ ಸಿನಿಮಾ ನೆನಪಾಗುತ್ತೆ. ಆರು ತಿಂಗಳಲ್ಲಿ ಮುಗಿಯಬೇಕಾದ ಸಿನಿಮಾ, ಎರಡು ವರ್ಷವಾಗುತ್ತೆ. ಅಷ್ಟರಲ್ಲಿ… ಇತ್ತ ಗಾಂಧಿನಗರದ ಮೂವತ್ತು ಕೋಟಿ ಸಾಲ ಬಡ್ಡಿ ಸೇರಿ ಅರವತ್ತು ಕೋಟಿಯಾಗಿರುತ್ತೆ. ಬಿಡುಗಡೆ ಹೊತ್ತಿಗೆ ಸಾಲ ತೀರಿಸಬೇಕಿರುತ್ತೆ. ಆದರೆ ತೀರಿಸೋಕೆ ಇವರ ಹತ್ತಿರ ಅಷ್ಟು ಹಣ ಇರಲ್ಲ. ಆಗ ಅಯ್ಯೋ ನಮಗೆ ಲಾಸ್‌ ಆಯ್ತು.. ನಾವು ಕಷ್ಟದಲ್ಲಿದ್ದೇವೆ... ಈ ಸಿನಿಮಾ ಮಾಡಿ ನಾನು ಹಾಳದೆ, ಈ ಹೀರೋ ನಂಬಿ ನಾನು ಮನೆಮಠ ಕಳೆದುಕೊಂಡೆ ಅಂತ ಹೇಳುತ್ತಾರೆ. ಹೀರೋ ಮರ್ಯಾದೆ ತೆಗೆಯುತ್ತಾರೆ" ಎಂದು ಗಾಂಧಿನಗರದ ಅಸಲಿ ಕಥೆ ತಿಳಿಸಿದ್ದಾರೆ.

"ಇತ್ತ ಅಭಿಮಾನಿಗಳು ಥಿಯೇಟರ್‌ ಮುಂದೆ ಕೂತು ಅವರ ಮೆಚ್ಚಿನ ನಟನ ಸಿನಿಮಾಗೆ ಈ ರೀತಿ ಆಗ್ತಿರೋದನ್ನು ನೆನೆದು ಕಣ್ಣೀರು ಹಾಕ್ತಾರೆ. ದಯವಿಟ್ಟು ನಿರ್ಮಾಪಕರನ್ನು ಬದಲಾಯಿಸಿ ಅಣ್ಣ... ಅಂತ ಕೂಗ್ತಿರ್ತಾರೆ. ಅತ್ತ ನಿರ್ಮಾಪಕನ ಅಸಹಕಾರ, ಇತ್ತ ಅಭಿಮಾನಿಗಳ ಒತ್ತಡ... ಆಗ ಹೀರೋ ಮಧ್ಯಪ್ರವೇಶ ಮಾಡಬೇಕು. ಎಲ್ಲೆಲ್ಲಿಂದಲೋ ಹಣ ತಂದುಕೊಟ್ಟು ಸಿನಿಮಾ ಬಿಡುಗಡೆಗೊಳಿಸಬೇಕು. ರನ್ನ ಸಿನಿಮಾಗೆ ಆಗಿದ್ದು ಇದೆ ಕಥೆ. ಕೋಟಿಗೊಬ್ಬ ಸಿನಿಮಾಗೆ ಆಗಿದ್ದೂ ಇದೇ. ಎರಡೂ ಸಿನಿಮಾಗಳೂ ಬಿಡುಗಡೆ ಸಂಕಷ್ಟವನ್ನು ಎದುರಿಸಿದ್ದವು. ಇದಕ್ಕೆ ಕಾರಣವಾದವರು ಯಾರು? ಅದೇ ಸೋ ಕಾಲ್ಡ್ ಹಳೇ ಸ್ನೇಹಿತರು" ಎಂದು ವೀರಕಪುತ್ರ ಶ್ರೀನಿವಾಸ ಎಳೆ ಎಳೆಯಾಗಿ ಅಸಲಿ ಸ್ಥಿತಿ ಬಿಚ್ಚಿಟ್ಟಿದ್ದಾರೆ.

"ಸೂರಪ್ಪ ಬಾಬು ಅಂತ ಒಬ್ಬರಿದ್ದಾರೆ. ಈ ಪ್ರಕರಣದಲ್ಲಿ ಅವರು ಎಲ್ಲೂ ಕಾಣಿಸ್ತಿಲ್ಲ ಅಷ್ಟೇ, ಆದ್ರೆ ಇದರ ಹಿಂದೆ ನಿಂತು ನಡೆಸ್ತಿರೋರಲ್ಲಿ ಅವರು ಕೂಡ ಒಬ್ಬರು. ಸೂರಪ್ಪ ಬಾಬು ಅವರು ನನಗೆ ಆತ್ಮೀಯರಾಗಿದ್ದವರು. ಅದೇ ಕಾರಣಕ್ಕೆ ಅವರು ನಾನು ಅನೇಕ ವಿಷಯಗಳ ಬಗ್ಗೆ ಅನೇಕ ವರ್ಷಗಳಿಂದ ಮಾತನಾಡ್ತಾ ಬಂದಿದ್ದೇವೆ. ಅವುಗಳ ಬಗ್ಗೆ ಈಗ ಹೇಳುವುದು ನನ್ನ ವ್ಯಕ್ತಿತ್ವ ಅಲ್ಲ. ಆದ್ರೆ ಅವರ ಮನಸಲ್ಲಿ ಒಳ್ಳೇತನವಿಲ್ಲ ಎಂಬುದು ಮಾತ್ರ ಸತ್ಯ. ಅವರಿಗೆ ವಿಷ್ಣು ಸರ್‌ ಬಗ್ಗೆಯೂ ಗೌರವವರಿಲಿಲ್ಲ, ಸುದೀಪ್‌ ಸರ್‌ ಬಗ್ಗೆಯೂ ಗೌರವವಿರಲಿಲ್ಲ. ನನ್ನ ಜೊತೆ ಮಾತನಾಡುವಾಗಲೆಲ್ಲಾ ಅವರಿಬ್ಬರನ್ನು ಏಕವಚನದಲ್ಲಿಯೇ ಸಂಭೋದಿಸಿದ್ದಾರೆ" ಎಂದು ಬರೆದಿದ್ದಾರೆ.

"ಕೇವಲ ವ್ಯವಹಾರಕ್ಕೆ ಮಾತ್ರ ಇವರು ಅವರಿಬ್ಬರ ಜೊತೆ ಚೆನ್ನಾಗಿದ್ದರು ಅಷ್ಟೇ. ಇದೇ ಸೂರಪ್ಪಬಾಬು ಅವ್ರು… ಬಸವೇಶ್ವರ ನಗರದ ಹೋಟೆಲ್‌ ಒಂದರಲ್ಲಿ ಅನ್ನದ ಎದುರು ಕೂತು ಹೇಳಿದ್ದ ಮಾತು “ಕೋಟಿಗೊಬ್ಬ2 ರಲ್ಲಿ ನನ್ನಿಂದ ಸುದೀಪ್‌ ಅವ್ರಿಗೆ ಸ್ವಲ್ಪ ಬೇಸರವಾಗಿದೆ. ನನ್ನ ಸ್ವಯಂಕೃತ ಅಪರಾಧಗಳಿಂದಾಗಿ ಸಿನಿಮಾ ಹಿಟ್ ಆದ್ರೂ ನನಗೆ ಲಾಭವಾಗಲಿಲ್ಲ. ಹೇಗೋ… ನನಗೆ ಇಬ್ಬರು ಹೆಣ್ಮಕ್ಕಳ್ಳಿರುವ ವಿಷಯ ಸುದೀಪ್‌ ಅವರಿಗೆ ಗೊತ್ತಾದ ಮೇಲೆ ಅವರೇ ಕರೆದು ಕೋಟಿಗೊಬ್ಬ 3 ಸಿನಿಮಾ ಮಾಡೋಕೆ ಅವಕಾಶ ಕೊಟ್ರು ಅಂತ ಹೇಳಿದ್ದರು. ಆದ್ರೆ ಅದೇ ಸೂರಪ್ಪಬಾಬು ಇವತ್ತು ಈ ಷಡ್ಯಂತ್ರದ ಭಾಗವಾಗಿದ್ದಾರೆ. ಸುದೀಪ್‌ ಅವ್ರ ತೇಜೋವಧೆಗೆ ಇಳಿದಿದ್ದಾರೆ. ಅನೇಕ ಪತ್ರಕರ್ತರಿಗೆ ಕರೆಮಾಡಿ, ನಾಳೆ ಸುದೀಪ್‌ ವಿರುದ್ದ ಪ್ರೆಸ್ಮೀಟ್‌ ಇದೆ, ನಿಮ್ಮ ಫುಲ್‌ ಸಪೋರ್ಟ್‌ ಬೇಕು ಅಂತ ಕೇಳಿದ್ದಾರೆ. ತಪ್ಪಲ್ವಾ.. ಸೂರಪ್ಪ ಬಾಬು ಅವರೇ... ನಿಮ್ಮ ಕಷ್ಟಕ್ಕೆ ಅಂತ ಜೊತೆಯಾದ ವ್ಯಕ್ತಿ ಬಗ್ಗೆ ಹೀಗೆಲ್ಲಾ ಮಾಡುವುದು ತಪ್ಪಲ್ವಾ..? ಇವತ್ತು ಸುದೀಪ್‌ ಅವ್ರು ಮತ್ತೆ ಕಾಲ್‌ಶೀಟ್‌  ಕೊಡ್ತಿಲ್ಲ ಅಂತ ನೀವು ಆರೋಪ ಮಾಡಲು ಪ್ರೆಸ್ಮೀಟ್‌ ಮಾಡಿಸ್ತೀದ್ದೀರಲ್ವಾ!  ನಿಮ್ಮ ಕೋಟಿಗೊಬ್ಬ ೩ ಸಿನಿಮಾ ಬಿಡುಗಡೆ ನಿಂತು ಹೋದ ದಿನ,  ನಾನು ಜಾಕ್‌ ಮಂಜು ಅವರ ಮೂಲಕ ಹಣ ಕಳುಹಿಸಿಕೊಟ್ಟೆ ಅದನ್ನು ನೀವು ಎರಡೂವರೆ ವರ್ಷಗಳ ಕಾಲ ಕಾಡಿಸಿ, ಆಡಿಸಿ, ನೋಯಿಸಿ ವಾಪಸ್ಸು ಮಾಡಿದ್ರಿ. ಇನ್ನೂ ಸ್ವಲ್ಪ ಹಣ ಬಂದೇ ಇಲ್ಲ! ಅದರ ಬಗ್ಗೆ ನಾನೂ ಪ್ರೆಸ್ಮೀಟ್‌ ಮಾಡ್ಲಾ? ನಿಮ್ಜೊತೆಗಿನ ಸ್ಕ್ರೀನ್‌ ಶಾಟ್‌ ಗಳನ್ನು ಶೇರ್‌ ಮಾಡ್ಲಾ?  ನೀವು ಜೊತೆಗಿದ್ದವರಿಗೆ ಹೀಗೆ ಬೆನ್ನಿಗೆ ಚೂರಿ ಹಾಕುವುದಾದರೆ, ನಾನೂ ಹಾಕಬಹುದಿತ್ತಲ್ಲವಾ? ಆದ್ರೆ ನಾನು ಆ ಕೆಲಸ ಮಾಡಲಿಲ್ಲ ಏಕೆಂದರೆ ನನ್ನ ಯಜಮಾನ್ರು ಆ ಸಂಸ್ಕಾರ ನನಗೆ ಕಲಿಸಿಲ್ಲ. ಬಟ್‌ ಯಜಮಾನ್ರ ಗರಡಿಯಲ್ಲಿ ಪಳಗಿದ ನಿಮಗ್ಯಾಕೆ ಆ ಸಂಸ್ಕಾರ ಬರಲಿಲ್ಲ?" ಎಂದು ವೀರಕಪುತ್ರ ಶ್ರೀನಿವಾಸ ಪ್ರಶ್ನಿಸಿದ್ದಾರೆ.

"ಸುದೀಪ್‌ ಸರ್‌ ಹತ್ತು ವರ್ಷಗಳ ಹಿಂದೆ ಇದ್ದ ರೀತಿ ಇಂದು ಇದ್ದಿದ್ದರೆ ಇವರುಗಳು ಹೀಗೆಲ್ಲಾ ಮಾತನಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ಅವರೀಗ ಬದಲಾಗಿದ್ದಾರೆ. ನಡೆ ನುಡಿಯಲ್ಲಿ ಸಂಯಮ, ಸಂಸ್ಕಾರ, ಹಿರಿಯರ ಬಗ್ಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ಕೊಡ್ತಾ ಸಮಸ್ತ ಚಿತ್ರರಂಗ ನನ್ನ ಕುಟುಂಬ ಎಂಬ ಭಾವಬಿತ್ತಿ ಬೆಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವರೆಲ್ಲರೂ ಅವರ ಸಂಯಮವನ್ನು ಅಣಕಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿರುವುದು ಬೆಂಗಳೂರಿನ ಅಭಿಮಾನಿಗಳು ಮಾತ್ರವಲ್ಲ ರಾಜ್ಯದಲ್ಲಿರುವ ಸುದೀಪ್‌ ಅವ್ರ ಅಭಿಮಾನಿಗಳೆಲ್ಲರೂ ಈ ನಿರ್ಮಾಪಕರ ಮನೆಗಳ ಎದುರು ಧರಣಿ ಕೂತು, ದಾಖಲೆ ಕೇಳಬೇಕು. ದಾಖಲೆ ಕೊಡಲಾಗದಿದ್ದರೆ ಕ್ಷಮೆ ಕೇಳುವಂತೆ ಮಾಡಬೇಕು. ಒಬ್ಬರ ಒಳ್ಳೇತನ ಸಮಯಸಾಧಕರಿಗೆ ಅಸ್ತ್ರವಾಗಬಾರದು." ಎಂದು ವೀರಕಪುತ್ರ ಶ್ರೀನಿವಾಸ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com