ತಬಲಾ ನಾಣಿ ಹೊಸ ಸಿನಿಮಾ 'ನನಗೂ ಹೆಂಡ್ತಿ ಬೇಕು': ನಾಯಕಿಯಾಗಿ ಚೈತ್ರಾ ಕೋಟೂರ್
ಈ ಹಿಂದೆ ದೇಶಪ್ರೇಮ ಸಾರುವ 'ಆ್ಯಕ್ಟ್ 370' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಕೆ ಶಂಕರ್ ಅವರು 'ನನಗೂ ಹೆಂಡ್ತಿ ಬೇಕು' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಾಸ್' ಮೂಲಕ ಚಿರಪರಿಚಿತರಾದ ನಟಿ ಚೈತ್ರಾ ಕೋಟೂರು ಅವರು ಈಗ ಹೊಸದೊಂದು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ತಬಲಾ ನಾಣಿ ಕೂಡ ನಟಿಸುತ್ತಿದ್ದಾರೆ.
ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರವನ್ನು ಈ ಸಿನಿಮಾವು ಹೊಂದಿದೆಯಂತೆ. ಈಗಾಗಲೇ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು ಸದ್ಯ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ.
'ನನಗೂ ಹೆಂಡ್ತಿ ಬೇಕು' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವುದು ಕೆ ಶಂಕರ್. ಇದೊಂದು ಸಂಪೂರ್ಣ ಕಾಮಿಡಿ ಜಾನರ್ ಚಿತ್ರವಾಗಿದೆ. ಮದುವೆಯಾಗಲು ಹೆಣ್ಣು ಸಿಗದೇ ಪರಿತಪಿಸುವ ಅಂಧ ವ್ಯಕ್ತಿಯ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ನನಗೂ ಹೆಂಡ್ತಿ ಬೇಕು' ಚಿತ್ರದಲ್ಲಿ ಚೈತ್ರಾ ಮಾತು ಬಾರದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ತಬಲಾ ನಾಣಿ, ಚೈತ್ರಾ ಕೋಟೂರು ಜೊತೆಗೆ ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶ್ರುತಿ, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್, ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, 'ಕೆಜಿಎಫ್' ಕೃಷ್ಣಪ್ಪ, ಪ್ರಿಯಾಂಕಾ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಎರಡು ಫೈಟ್ ಮತ್ತು ಎರಡು ಹಾಡುಗಳಿವೆ. ಕೆ ಎಮ್ ಇಂದ್ರ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಲೈರಾ ಎಂಟರ್‌ಟೈನ್ಮೆಂಟ್ & ಮೀಡಿಯಾ ಬ್ಯಾನರ್ ಅಡಿಯಲ್ಲಿ ಭರತ್ ಗೌಡ ಮತ್ತು ಸಿ ರಮೇಶ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ