ಹೀರೋ-ಹೀರೋಯಿನ್ ಇಲ್ಲ, ವಿಲನ್ ಗಳೇ ಎಲ್ಲಾ: 'BAD' ಚಿತ್ರಕ್ಕಾಗಿ ಜೊತೆಯಾದ ಪಿಸಿ ಶೇಖರ್-ನಕುಲ್ ಗೌಡ
'ರೋಮಿಯೋ', 'ಚಡ್ಡಿದೋಸ್ತ್', 'ಅರ್ಜುನ', 'ಸ್ಟೈಲ್ ಕಿಂಗ್ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪಿ ಸಿ ಶೇಖರ್ ಇದೀಗ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.
ನಕುಲ್ ಗೌಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ BAD ಎಂದು ಶೀರ್ಷಿಕೆ ನೀಡಲಾಗಿದೆ. ಈ ರೀತಿ ಹೆಸರಿಡಲು ಕಾರಣವೂ ಇದೆ. ಈ ಚಿತ್ರ ವಿಭಿನ್ನ ಪ್ರಯತ್ನವಾಗಿದ್ದು, ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯೇ ಇರುವುದಿಲ್ಲ. ಎಲ್ಲರೂ ವಿಲನ್ ಗಳೇ ಆಗಿದ್ದಾರೆ.
“ರೋಷಮಾನ್ ಎಫೆಕ್ಟ್” ಎಂಬ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಜಪಾನ್ ನಿರ್ದೇಶರೊಬ್ಬರು ಈ ವಿಧಾನವನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದ್ದರು. ಈ ವಿಧಾನವನ್ನು ಪಿಸಿ ಶೇಖರ್ ಅವರು ಬಳಕೆ ಮಾಡಿದ್ದಾರೆ. ಕನ್ನಡದಲ್ಲಿ ಇದರ ಬಳಕೆಯಾಗಿರುವುದು ವಿರಳ ಎನ್ನಬಹುದು. ಒಂದೇ ಕಥೆಯನ್ನೇ ಬೇರೆಬೇರೆಯವರು ಹೇಳುವ ವಿಧಾನ ಬೇರೆ ರೀತಿ ಆಗಿರುತ್ತದೆ.
ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಪೂರ್ಣಗೊಂಡಿದ್ದು. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
"ರಾಗ ಹಾಗೂ "ದಿ ಟೆರರಿಸ್ಟ್" ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಸಚಿನ್ ಬಿ ಹೊಳಗುಂಡಿ ಅವರು BAD ಚಿತ್ರಕ್ಕೆ ಸಂಭಾಷಣೆ ಬರೆದಿದ್ದರೆ, ಅರ್ಜುನ್ಯ ಅವರು ಸಂಗೀತ ನೀಡಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಹಣ ಮಾಡಿದ್ದು, ಜಿ. ರಾಜಶೇಖರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.


