'ನಾಟು ನಾಟು' ಹಾಡು ಹಾಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ದೇಶದ ಜನತೆ ಮುಳುಗಿದ್ದು, ಆದರೆ ನಾಟು ನಾಟು ಹಾಡು ನಿಜವಾಗಿಯೂ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆಯೇ ನಟಿಯೊಬ್ಬರು ಪ್ರಶ್ನಿಸಿದ್ದು ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅನನ್ಯಾ ಚಟರ್ಜಿ ತಮ್ಮ ಫೇಸ್‌ಬುಕ್ ಪೋಸ್ಟ್ ನಲ್ಲಿ ನಾಟು ನಾಟು ಸಾಧಿಸಿದ ಐತಿಹಾಸಿಕ ಸಾಧನೆಯಿಂದ ನಿಜಕ್ಕೂ ಖುಷಿ ಪಡಬೇಕೇ ಎಂಬ ಅನುಮಾನ ಕಾಡುತ್ತಿದೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
'ನನಗೆ ಅರ್ಥವಾಗುತ್ತಿಲ್ಲ, 'ನಾಟು ನಾಟು' ಅಂತ ಹೆಮ್ಮೆ ಪಡಬೇಕಾ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಲ್ಲರೂ ಯಾಕೆ ಮೌನವಾಗಿದ್ದಾರೆ? ಎಂದು ಅನನ್ಯಾ ಬರೆದುಕೊಂಡಿದ್ದರು. ಇದಕ್ಕೆ ನೆಟ್ಟಿಗರು ನಟಿಯನ್ನು ಟೀಕಿಸುವ ಮತ್ತು ಅಪಹಾಸ್ಯ ಮಾಡುವ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಡನ್ನು ಟೀಕಿಸಬೇಡಿ. ನಿಮ್ಮ ಅಸೂಯೆ ಮತ್ತು ನಿಮ್ಮ ಪ್ರಚಾರವನ್ನು ಪಡೆಯುವ ವಿಧಾನ ನನಗೆ ಅರ್ಥವಾಗಿದೆ. ಮೊದಲು ಬೆಂಗಾಲಿ ಚಲನಚಿತ್ರೋದ್ಯಮದಲ್ಲಿ ಏನನ್ನಾದರೂ ಮಾಡಲು ಪ್ರಯತ್ನಿಸಿ. ಆಗ ಅದು ಜಾಗತಿಕ ಪ್ರೇಕ್ಷಕರಿಂದ ಪ್ರಶಂಸೆಗೆ ಒಳಗಾಗುತ್ತದೆ ಎಂದು ಟೀಕಿಸುತ್ತಿದ್ದಾರೆ.
95ನೇ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಹಾಗೂ ಲೇಖಕ ಚಂದ್ರ ಬೋಸ್ ಪ್ರಶಸ್ತಿ ಸ್ವೀಕರಿಸಿದರು. ಆರ್‌ಆರ್‌ಆರ್ ಚಿತ್ರದ ಈ ಹಾಡನ್ನು ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಭೈರವ ಹಾಡಿದ್ದಾರೆ.
Advertisement