'80 ಅಲ್ಲ.. 8...'; RRR ಚಿತ್ರದ ಆಸ್ಕರ್ ರೇಸ್ ಗೆ ಖರ್ಚಾದ ಹಣದ ಲೆಕ್ಕ ನೀಡಿದ ಲೈನ್ ಪ್ರೊಡ್ಯೂಸರ್ SS ಕಾರ್ತಿಕೇಯ

ಆಸ್ಕರ್ ಗೆಲ್ಲಲು ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎಂಬ ಆರೋಪದ ನಡುವೆಯೇ ಈಗ ಚಿತ್ರದ ಲೈನ್ ಪ್ರೊಡ್ಯೂಸರ್ ಕೂಡ ಆಗಿದ್ದ ರಾಜಮಳಿ ಪುತ್ರ ಕಾರ್ತಿಕೇಯ ಅವರು ಇದರ ಅಸಲಿ ಲೆಕ್ಕ ನೀಡಿದ್ದಾರೆ.
RRR ಚಿತ್ರದ ಆಸ್ಕರ್ ಪ್ರಶಸ್ತಿ
RRR ಚಿತ್ರದ ಆಸ್ಕರ್ ಪ್ರಶಸ್ತಿ

ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ RRR ಚಿತ್ರ ಆಸ್ಕರ್ ರೇಸ್ ಗೆ ಹೋಗಿದ್ದು ಮಾತ್ರವಲ್ಲದೇ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಪಡೆದಿದೆ. ಆದರೆ ಈ ಆಸ್ಕರ್ ರೇಸ್ ಗೆ ಖರ್ಚಾದ ಹಣ ಕುರಿತು ವ್ಯಾಪಕ ಚರ್ಚೆಗಳಾಗುತ್ತಿರುವಂತೆಯೇ ಇತ್ತ ಚಿತ್ರದ ಲೈನ್ ಪ್ರೊಡ್ಯೂಸರ್ ಮತ್ತು ನಿರ್ದೇಶಕ ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ RRR ಚಿತ್ರದ ಆಸ್ಕರ್ ರೇಸ್ ಗೆ ಖರ್ಚಾದ ಹಣದ ಲೆಕ್ಕ ನೀಡಿದ್ದಾರೆ.

‘ಆರ್​ಆರ್​ಆರ್​’ (RRR Movie) ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಗೆದ್ದು ಹೊಸ ದಾಖಲೆ ಬರೆದಿದೆ. ಈ ಸಿನಿಮಾ ಮಾಡಿದ ದಾಖಲೆಗಳು ಹಲವು. ಹಾಡು ಆಸ್ಕರ್ ಗೆದ್ದ ವಿಚಾರದಲ್ಲಿ ಕೆಲ ಚರ್ಚೆಗಳು ಹುಟ್ಟಿಕೊಂಡಿವೆ. ಆಸ್ಕರ್ ಕ್ಯಾಂಪೇನ್​ಗೆ ರಾಜಮೌಳಿ 80 ಕೋಟಿ ರೂಪಾಯಿ ವ್ಯಯಿಸಿದ್ದಾರೆ ಎಂದೆಲ್ಲ ವರದಿ ಆಗಿತ್ತು. ಆಸ್ಕರ್ ಗೆಲ್ಲಲು ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎಂಬ ಆರೋಪಗಳ ನಡುವೆಯೇ ಈಗ ಚಿತ್ರದ ಲೈನ್ ಪ್ರೊಡ್ಯೂಸರ್ ಕೂಡ ಆಗಿದ್ದ ರಾಜಮಳಿ ಪುತ್ರ ಕಾರ್ತಿಕೇಯ ಅವರು ಇದರ ಅಸಲಿ ಲೆಕ್ಕ ನೀಡಿದ್ದಾರೆ.

ಆಸ್ಕರ್ ಕ್ಯಾಂಪೇನ್​ಗೆ ಖರ್ಚಾದ ಮೊತ್ತ ಕೇವಲ 8 ಕೋಟಿ ರೂಪಾಯಿ. ಆರಂಭದಲ್ಲಿ ನಾವು 5 ಕೋಟಿ ರೂಪಾಯಿಯಲ್ಲಿ ಸಿನಿಮಾಗೆ ಕ್ಯಾಂಪೇನ್ ಮಾಡಬಹುದು ಎಂದುಕೊಂಡಿದ್ದೆವು. ಆದರೆ, ನಾವು ಅಂದುಕೊಂಡಿದ್ದಕ್ಕಿಂತ 3.5 ಕೋಟಿ ರೂಪಾಯಿ ಹೆಚ್ಚಾಗಿ ಖರ್ಚಾಯಿತು. ಹಲವು ಕಡೆಗಳಲ್ಲಿ ಸಿನಿಮಾ ಸ್ಕ್ರೀನಿಂಗ್ ಮಾಡಬೇಕಿತ್ತು. ಒಟ್ಟಾರೆ ಖರ್ಚಾದ ಹಣ 8.5 ಕೋಟಿ ರೂಪಾಯಿ. ಇದಕ್ಕೆ ಯಾರ ಸಹಾಯವನ್ನೂ ನಾವು ಪಡೆದಿಲ್ಲ. ನಮ್ಮ ಜೇಬಿನಿಂದ ಖರ್ಚು ಮಾಡಿದ್ದೇವೆ’ ಎಂದು ಕಾರ್ತಿಕೇಯ ಹೇಳಿದ್ದಾರೆ.

ಅಂತೆಯೇ ‘ಜನರ ಪ್ರೀತಿಯನ್ನು ಖರೀದಿಸಲು ಸಾಧ್ಯವಿಲ್ಲ. ಜೇಮ್ಸ್ ಕ್ಯಾಮೆರೂನ್ ಮತ್ತು ಸ್ಟೀವನ್ ಸ್ಪೀಲ್‌ಬರ್ಗ್‌ ಅಂತಹ ಖ್ಯಾತ ನಾಮರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬೆಲೆಕಟ್ಟಲಾಗದು. ಈ ರೀತಿ ಮಾತನಾಡಲು ದುಡ್ಡು ಕೊಡೋಕೆ ಆಗಲ್ಲ. ನಾವು ಆ ಗೌರವವನ್ನು ಗಳಿಸಿದ್ದಕ್ಕಾಗಿ ನನಗೆ ಸಂತೋಷವಿದೆ’ ಎಂದು ಅವರು ಹೇಳಿದ್ದಾರೆ.

ಆಸ್ಕರ್​, ಗೋಲ್ಡನ್ ಗ್ಲೋಬ್ಸ್ ಮೊದಲಾದ ಪ್ರಶಸ್ತಿಗಳು ಹಾಲಿವುಡ್​ ಅವಾರ್ಡ್​ಗಳು. ಇಲ್ಲಿ ಭಾರತದ ಸಿನಿಮಾಗಳು ರೇಸ್​ಗೆ ಇಳಿಯೋದು, ಪ್ರಶಸ್ತಿ ಬಾಚಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ, ‘ಆರ್​ಆರ್​ಆರ್​’ ಸಿನಿಮಾ ಸಾಲು ಸಾಲು ಪ್ರಶಸ್ತಿಗಳನ್ನು ಗೆಲ್ಲುತ್ತಿದೆ. ‘ಹಾಲಿವುಡ್​ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್​’, ‘ಗೋಲ್ಡನ್​ ಗ್ಲೋಬ್ ಅವಾರ್ಡ್’, ಆಸ್ಕರ್​ ಅವಾರ್ಡ್​​​​ಗಳನ್ನು ಚಿತ್ರ ಪಡೆದಿದೆ. 

ಆಸ್ಕರ್ ಪ್ರಶಸ್ತಿ ವೇಳೆ ನಿರ್ಮಾಪಕರೇ ನಾಪತ್ತೆ!!
ಇನ್ನು RRR ಚಿತ್ರ ಬಾಕ್ಸ್ ಆಫೀಸ್ ಗಳಿಕೆಯ ಯಶಸ್ಸಿನ ಬೆನ್ನಲ್ಲೇ ರಾಜಮೌಳಿ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ಜಾಗತಿಕ ವೇದಿಕೆಗಳಲ್ಲಿ ಚಿತ್ರ ಪ್ರದರ್ಶನ ಮಾಡಿಸಲು ಮುಂದಾಗಿದ್ದರು. ಇದಕ್ಕೆ ಇಂಬು ನೀಡುವಂತೆ ಕ್ರಿಟಿಕ್ಸ್ ಅವಾರ್ಡ್ ಮತ್ತು ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ಈ ಎರಡು ಕಾರ್ಯಕ್ರಮಗಳಲ್ಲಿ ನಿರ್ಮಾಪಕ ಗೈರು ಎದ್ದು ಕಾಣುತ್ತಿತ್ತು. ‘ಆರ್​ಆರ್​ಆರ್​’ ಚಿತ್ರದ ನಿರ್ಮಾಪಕ ದಾನಯ್ಯ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ತಂಡದ ಜೊತೆ ಅವರು ವೈಮನಸ್ಸು ಹೊಂದಿದ್ದಾರೆ ಎಂದೆಲ್ಲ ಸುದ್ದಿ ಬಿತ್ತರ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com