'ಡೇರ್‌ಡೆವಿಲ್ ಮುಸ್ತಾಫಾ' ಯಶಸ್ವಿ ಪ್ರದರ್ಶನ; ವಿದೇಶಗಳಲ್ಲೂ ಚಿತ್ರ ಬಿಡುಗಡೆಗೆ ಸಿದ್ಧತೆ
ಬೆಂಗಳೂರು: ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧರಿಸಿ ನಿರ್ಮಾಣವಾಗಿರುವ 'ಡೇರ್‌ಡೆವಿಲ್ ಮುಸ್ತಾಫಾ' ಸಿನಿಮಾ ರಾಜ್ಯಾದ್ಯಂತ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ಹಲವು ಸೆಲೆಬ್ರಿಟಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಟ ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಸ್ತುತಪಡಿಸಿರುವ ಡೇರ್‌ಡೆವಿಲ್ ಮುಸ್ತಾಫಾ ಬೆಂಗಳೂರು, ಮಂಗಳೂರು, ಶಿವಮೊಗ್ಗ ಮತ್ತು ಮೈಸೂರು ಸೇರಿದಂತೆ ಸುಮಾರು 40 ಕೇಂದ್ರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಡೇರ್‌ಡೆವಿಲ್ ಮುಸ್ತಾಫಾ ವಿದೇಶಕ್ಕೆ ಹೊರಟು ನಿಂತಿದೆ. ಅಮೆರಿಕಾ, ಯೂರೋಪ್, ದುಬೈನ ಹಲವೆಡೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಥತೆ ನಡೆಸಿದೆ.
ಈ ವಾರ ಅಮೆರಿಕ ಮತ್ತು ಯುರೋಪ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ನಂತರ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದುಬೈ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಮುಂದಿನ ವಾರದಲ್ಲಿ ಬಿಡುಗಡೆಯಾಗಲಿದೆ.
ಡೇರ್‌ಡೆವಿಲ್ ಮುಸ್ತಾಫಾ ಚಿತ್ರ, ಕಾಲೇಜು ವಿದ್ಯಾರ್ಥಿಗಳ ಜೀವನ ಆಧರಿಸಿದ ಹಾಸ್ಯಮಯ ಚಿತ್ರವಾಗಿದ್ದು, ವಿಶೇಷವಾಗಿ ಹಿಂದೂ ಕಾಲೇಜಿನ ಏಕೈಕ ಮುಸ್ಲಿಂ ವಿದ್ಯಾರ್ಥಿ ಮುಸ್ತಫಾ ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರೀಕರಿಸಿದೆ.
ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ