
ನಿರ್ದೇಶಕ ನಾಗಶೇಖರ್ ಸದ್ಯ ನಟ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಂಜು ವೆಡ್ಸ್ ಗೀತಾ II ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಕನಕಪುರ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ವೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಚಿತ್ರದ ಪ್ರಗತಿ ಕುರಿತು ಮಾತನಾಡಿದ ನಾಗಶೇಖರ್, ಚಿತ್ರವು ಹೇಗೆ ರೂಪುಗೊಳ್ಳುತ್ತಿದೆ ಎಂಬುದರ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಶೂಟಿಂಗ್ ಕುರಿತಾದ ಯೋಜನೆಗಳನ್ನು ಹಂಚಿಕೊಂಡರು. 'ನಾವು ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಲು ಯೋಜಿಸುತ್ತಿದ್ದೇವೆ. ನಂತರ 12 ದಿನಗಳ ಕಾಲ ಸ್ವಿಟ್ಜರ್ಲೆಂಡ್‌ಗೆ ಹೋಗುತ್ತೇವೆ. ನಂತರ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸುತ್ತೇವೆ' ಎಂದು ನಾಗಶೇಖರ್ ಹೇಳುತ್ತಾರೆ.
ಮುಂದಿನ ವರ್ಷ ಏಪ್ರಿಲ್ 1ರಂದು ಚಿತ್ರಬಿಡುಗಡೆಗೆ ನಿರ್ದೇಶಕರು ಯೋಜನೆ ರೂಪಿಸಿದ್ದು, ಡಿಸೆಂಬರ್ 29 ರಂದು ಅವರ ಸ್ನೇಹಿತ ಮತ್ತು ನಿರ್ಮಾಪಕ ಚಲವಾದಿ ಕುಮಾರ್ ಅವರ ಜನ್ಮದಿನದಂದು ಟ್ರೇಲರ್ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ.
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಹೊರತುಪಡಿಸಿ, ಈ ಚಿತ್ರದಲ್ಲಿ ರಂಗಾಯಣ ರಘು ಮತ್ತು ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು, ಕವಿ ರಾಜ್ ಸಾಹಿತ್ಯ ಬರೆದಿದ್ದಾರೆ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.
Advertisement