ಕೇರಳ: ಸಿನಿಮಾ ಬಗ್ಗೆ ನಕಾರಾತ್ಮಕ ವಿಮರ್ಶೆ ಪ್ರಕಟಿಸಿದ್ದ 7 ಯೂಟ್ಯೂಬರ್‌, ವ್ಲಾಗರ್‌ ವಿರುದ್ಧ ಕೇಸ್ ದಾಖಲು

ಚಲನಚಿತ್ರವೊಂದರ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ನಕಾರಾತ್ಮಕ ವಿಮರ್ಶೆಗಳನ್ನು ಪ್ರಕಟಿಸಿದ್ದಕ್ಕಾಗಿ ಏಳು ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳ ವಿರುದ್ಧ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಪ್ರಕರಣ..
ಯೂಟ್ಯೂಬ್ (ಸಂಗ್ರಹ ಚಿತ್ರ)
ಯೂಟ್ಯೂಬ್ (ಸಂಗ್ರಹ ಚಿತ್ರ)

ಕೊಚ್ಚಿ: ಚಲನಚಿತ್ರವೊಂದರ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ನಕಾರಾತ್ಮಕ ವಿಮರ್ಶೆಗಳನ್ನು ಪ್ರಕಟಿಸಿದ್ದಕ್ಕಾಗಿ ಏಳು ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳ ವಿರುದ್ಧ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಬಹುಶಃ ರಾಜ್ಯದಲ್ಲಿ ಈ ರೀತಿಯ ಮೊದಲ ಪ್ರಕರಣವಾಗಿದೆ.

ಇತ್ತೀಚಿಗಷ್ಟೇ ಕೇರಳ ಹೈಕೋರ್ಟ್, ವಿಮರ್ಶೆ ಎಂಬ ಬಾಂಬ್​ ಸಿನಿಮಾ ರಂಗವನ್ನು ನಾಶ ಮಾಡಬಾರದು. ಸಿನಿಮಾ ವಿಮರ್ಶೆಗಳ ಹೆಸರಲಿ ಹಣ ಸುಲಿಗೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಡಿಜಿಪಿಗೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಕೇರಳ ಪೊಲೀಸರು ಸುಲಿಗೆ ಮತ್ತು ಸಾರ್ವಜನಿಕ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ದೈತ್ಯರಾದ ಯೂಟ್ಯೂಬ್ ಮತ್ತು ಫೇಸ್‌ಬುಕ್ ಅನ್ನು ಸಹ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿದ್ದಾರೆ.

ರಾಹೆಲ್‌ ಮಕಲ್‌ ಕೋರಾ ಚಿತ್ರದ ನಿರ್ದೇಶಕರಾದ ಉಬೈನಿ ಇ ನೀಡಿದ ದೂರಿನನ್ವಯ ನಕಲಿ ಆನ್‌ಲೈನ್‌ ಸಿನಿಮಾ ವಿಮರ್ಶಕರ ವಿರುದ್ಧ ಕೇರಳ ಪೊಲೀಸರು ಸೆಕ್ಷನ್‌ 385 (ಸುಲಿಗೆ) ಮತ್ತು ಸೆಕ್ಷನ್‌ 120 (ಒ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಉಬೈನಿ ಇ ಅವರು, ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್‌ ಮಾಡುವ ಉದ್ದೇಶದಿಂದ ನನ್ನ ಚಲನಚಿತ್ರವನ್ನು ಉದ್ದೇಶಪೂರ್ವಕವಾಗಿ ಕೆಟ್ಟದ್ದಾಗಿ ಬಿಂಬಿಸಲಾಗಿದೆ, ನನ್ನ ಚಿತ್ರಕ್ಕೆ ಅವಮಾನಿಸಲಾಗಿದೆ ಎಂದು ದೂರು ನೀಡಿದ್ದರು.

ಉಬೈನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸಿನಿಮಾ ಪ್ರಚಾರ ಸಂಸ್ಥೆಯ ಮಾಲೀಕ ಹೈನ್ಸ್‌, ಸೋಷಿಯಲ್‌ ಮೀಡಿಯಾ ವಿಮರ್ಶಕ ಅರುಣ್‌ ತರಂಗ, ಅಸ್ವಂತ್‌ ಕೋಕ್‌, ಫೇಸ್‌ಬುಕ್‌ ಬಳಕೆದಾರ ಅನುಪನು6165, ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ ಸೋಲ್‌ಮೇಟ್ಸ್55 ಸೇರಿದಂತೆ ಹಲವು ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ ಬಳಕೆದಾರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಅಕ್ಟೋಬರ್ 13 ರಂದು ರಾಹೆಲ್ ಮಕನ್ ಕೋರಾ ಚಿತ್ರ ಬಿಡುಗಡೆಯಾದ ಕೂಡಲೇ ಚಿತ್ರದ ವಿರುದ್ಧ ನಕಾರಾತ್ಮಕ ವಿಮರ್ಶೆಗಳನ್ನು ಹೊಂದಿರುವ ಎರಡರಿಂದ ಏಳು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಮಲಯಾಳಂ ಚಲನಚಿತ್ರೋದ್ಯಮವು ಪೊಲೀಸರ ಈ ಕ್ರಮವನ್ನು ಶ್ಲಾಘಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮಗೆ ತೋಚಿದಂತೆ ನಕಾರಾತ್ಮಕ ವಿಮರ್ಶೆಗಳ ಮೂಲಕ ಚಿತ್ರವನ್ನು ಅವಮಾನಿಸುವ ಕೃತ್ಯ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com