'12th Fail' ಹಿಂದಿ ಸಿನಿಮಾದ ಕನ್ನಡ ಆವೃತ್ತಿ ವಿತರಣೆ ಹಕ್ಕು KRG Studios ಪಾಲು!
ಖ್ಯಾತ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ '12th Fail' ಹಿಂದಿ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದ್ದು, ಕರ್ನಾಟಕದಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ಹೆಸರಾಂತ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಪಡೆದುಕೊಂಡಿದೆ.
ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನು ಆಧರಿಸಿದ ಈ ಸಿನಿಮಾದಲ್ಲಿ ವಿಕ್ರಮ್ ಮಾಸಿ, ಪಲ್ಲಕ್ ಲಾಲ್ವಾನಿ ಮತ್ತು ನಟಿ ಮೇಧಾ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ.
ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ, ಚಿತ್ರವನ್ನು ಕರ್ನಾಟಕದಾದ್ಯಂತ ನಾವು ಸುಮಾರು 100ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ರೋಹಿತ್ ಪದಕಿ ಅವರ ಸಾರಥ್ಯದಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಕನ್ನಡದ ಹಾಡುಗಳನ್ನು ಕೇಳಿ ನಿರ್ದೇಶಕರು ಸಂತೋಷ ಪಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರಗಳನ್ನು ಕೆಆರ್‌ಜಿ ಸ್ಟುಡಿಯೋಸ್ ಮೂಲಕವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದರು.
ವಿಕ್ರಾಂತ್ ಮಾಸಿ ಮಾತನಾಡಿ, ಅಸಾಧ್ಯವನ್ನು ಸಾಧ್ಯವಾಗಿಸಿದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಈ ಚಿತ್ರದಲ್ಲಿ ಅಭಿನಯಿಸಿರುವುದು ಹೆಮ್ಮೆಯ ವಿಚಾರ ಎಂದರು.
ನಟಿ ಮೇಧಾ ಶಂಕರ್ ಮಾತನಾಡಿ, 'ನಾನು ಈವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಈ ಪಾತ್ರ ನಿಜವಾಗಿಯೂ ವಿಶೇಷವಾಗಿದೆ. ಈ ಚಿತ್ರದ ಭಾಗವಾಗಲು ವಿಧು ವಿನೋದ್ ಚೋಪ್ರಾ ನನ್ನನ್ನು ಆಹ್ವಾನಿಸಿದಾಗ ನಮಗೆ ಸಂತೋಷವಾಯಿತು. ಈ ಚಿತ್ರ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಎಂಬುದು ಹೆಮ್ಮೆಯ ವಿಷಯ' ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ