ನಟಿ ಮಹಾಲಕ್ಷ್ಮಿ ಪತಿ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಮದುವೆ ಆದಲ್ಲಿಂದ ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಿದ್ದ ಈ ಜೋಡಿಗೆ ಚೆನ್ನೈ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಪತಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್‌ರನ್ನು ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಕೆಲವೇ ದಿನಗಳ ಹಿಂದಷ್ಟೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇದಾದ ಕೇವಲ ನಾಲ್ಕು ದಿನಗಳಲ್ಲೇ ರವೀಂದ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬ ಉದ್ಯಮಿಗೆ ರವೀಂದ್ರ ಚಂದ್ರಶೇಖರ್ ವಂಚನೆ ಮಾಡಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ರವೀಂದ್ರ ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಕಾಪಾರನ್ನು ಪ್ರೇರೇಪಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 2020ಯಲ್ಲಿ ಸುಮಾರು 15.38 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಹಣ ಪಡೆದ ಬಳಿಕ ಯೋಜನೆಯನ್ನು ಆರಂಭಿಸಿಲ್ಲ ಹಾಗೂ ಹಣವನ್ನೂ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.
ಉದ್ಯಮಿ ಬಾಲಾಜಿ ಕಾಪಾ ನೀಡಿದ ದೂರಿನ ಮೇರೆಗೆ ತನಿಖೆಯನ್ನು ನಡೆಸಲಾಗಿತ್ತು. ಇದರಲ್ಲಿ ರವೀಂದ್ರ ಚಂದ್ರಶೇಖರ್ ದಾಖಲೆಗಳನ್ನು ನಕಲು ಮಾಡಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ರವೀಂದ್ರರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿತ್ತು. ಸದ್ಯ ನ್ಯಾಯಾಧೀಶರ ಆದೇಶದ ಹಿನ್ನೆಲೆ ರವೀಂದರ್ ಜೈಲಿನಲ್ಲಿದ್ದಾರೆ. ಇವರ ವಿರುದ್ಧ ಈಗಾಗಲೇ ಹಲವು ವಂಚನೆ ಪ್ರಕರಣಗಳು ರಿಜಿಸ್ಟರ್ ಆಗಿವೆ.
Advertisement