
ಗುರುವಾರ ಭರ್ಜರಿ ಓಪನಿಂಗ್ ಪಡೆದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 'ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವಂತೆ ಕನ್ನಡದ ಸೆಂಚುರಿ ಸ್ಟಾರ್ ಡಾ. ಶಿವರಾಜಕುಮಾರ್ ಅವರಿಗೆ ಹೊಸ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ.
ಜೈಲರ್ ನೋಡಿದ ಪ್ರೇಕ್ಷಕರು ನಮ್ಮ ಶಿವಣ್ಣನ ಅಭಿನಯಕ್ಕೆ ಪಿಧಾ ಆಗಿದ್ದಾರೆ. ಅವರ ಪಾತ್ರ ಚಿಕ್ಕದಾದರೂ ತುಂಬಾ ಪರಿಣಾಮಕಾರಿ ಎನಿಸಿದೆ. ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದು, ಅವರ ಮಾಸ್ ಲುಕ್, ಎಂಟ್ರಿ ಶೈಲಿ, ಮ್ಯಾನರಿಸಂ ಹಾಗೂ ಸಂಗೀತಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ.
ಸಿನಿಮಾದಲ್ಲಿ ರಜನಿಕಾಂತ್ ಅವರನ್ನು ಸರಿಗಟ್ಟುವ ಮಟ್ಟದಲ್ಲಿ ಶಿವಣ್ಣನ ಪಾತ್ರ ಮೂಡಿ ಬಂದಿದ್ದು, ಎಲ್ಲಾ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. ಈವರೆಗೂ ಅವರ ಒಂದೇ ಒಂದು ಸಿನಿಮಾ ನೋಡಿಲ್ಲದಿದ್ದರೂ ಜೈಲರ್ ನೋಡಿದ ನಂತರ ಅಭಿಮಾನಿಯಾಗಿರುವುದಾಗಿ ಅವರು ಟ್ವೀಟರ್ ನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಪರಭಾಷಿಕರು ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನ ಹಲವು ಪ್ರೇಕ್ಷಕರು ಶಿವಣ್ಣನ ನಟನೆಯನ್ನು ಇಷ್ಟಪಟ್ಟಿದ್ದು, ನಿರ್ದೇಶಕ ನೆಲ್ಸನ್ ಕನ್ನಡ ನಿರ್ದೇಶಕರಿಗಿಂತ ಚೆನ್ನಾಗಿ ಅವರನ್ನು ಬಳಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ.
ಜೈಲರ್ ಜೊತೆಗೆ ಶಿವರಾಜಕುಮಾರ್ ಧನುಷ್ ಅವರ 'ಕ್ಯಾಪ್ಟನ್ ಮಿಲ್ಲರ್ 'ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಸೆಂಚುರಿ ಸ್ಟಾರ್ ಅವರ ಮುಂದಿನ ಕನ್ನಡ ಚಿತ್ರ ಘೋಸ್ಟ್ ದಸರಾ ವೇಳೆಗೆ ಬಿಡುಗಡೆಗೆ ಸಜ್ಜಾಗಿದ್ದು, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಎದುರು ನೋಡುತ್ತಿದ್ದಾರೆ.
Advertisement