ಶಂಕರಾಭರಣಮ್, ಸಾಗರ ಸಂಗಮಮ್ ಸಿನಿಮಾಗಳ ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ನಿಧನ

ಸ್ವಾತಿ ಮುತ್ಯಮ್, ಶಂಕರಾಭರಣಂ, ಸಾಗರ ಸಂಗಮಮ್ ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ (ಕೆ.ವಿಶ್ವನಾಥ್) ಗುರುವಾರ (ಫೆ.2) ರಂದು ಇಹಲೋಕ ತ್ಯಜಿಸಿದ್ದಾರೆ. 
ನಿರ್ದೇಶಕ ಕೆ ವಿಶ್ವನಾಥ್
ನಿರ್ದೇಶಕ ಕೆ ವಿಶ್ವನಾಥ್

ಹೈದರಾಬಾದ್:  ಸ್ವಾತಿ ಮುತ್ಯಮ್, ಶಂಕರಾಭರಣಂ, ಸಾಗರ ಸಂಗಮಮ್ ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ (ಕೆ.ವಿಶ್ವನಾಥ್) ಗುರುವಾರ (ಫೆ.2) ರಂದು ಇಹಲೋಕ ತ್ಯಜಿಸಿದ್ದಾರೆ. 

ತೆಲುಗು ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಕೆ.ವಿಶ್ವನಾಥ್ (92) ಪ್ರಖ್ಯಾತಿ ಹೊಂದಿದ್ದರು. ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವರಾಭಿಷೇಕಂ, ಠಾಗೂರ್, ಅತಡು, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿಶ್ವನಾಥ್ ನಿರ್ದೇಶಕರಾಗಿ ಅಷ್ಟೇ ಅಲ್ಲದೇ ನಟರಾಗಿ, ಚಿತ್ರಕಥೆಗಾರರಾಗಿಯೂ ಛಾಪು ಮೂಡಿಸಿದ್ದರು.  

ಕೆ ವಿಶ್ವನಾಥ್ ಅವರು 5 ರಾಷ್ಟ್ರೀಯ ಸಿನಿಮಾ ಅವಾರ್ಡ್ ಗಳನ್ನು ಪಡೆದಿದ್ದು, ರಾಜ್ಯದ ನಂದಿ ಪ್ರಶಸ್ತಿಗೆ 7 ಬಾರಿ ಭಾಜನರಾಗಿದ್ದಾರೆ. 10 ಫಿಲ್ಮ್ ಫೇರ್ ಅವಾರ್ಡ್ ಗಳು, ಹಿಂದಿಯಲ್ಲಿ ಒಂದು ಫಿಲ್ಮ್ ಫೇರ್ ಅವಾರ್ಡ್ ಗಳನ್ನು ಪಡೆದಿರುವ ಕೆ.ವಿಶ್ವನಾಥ್ ಅವರನ್ನು ಭಾರತ ಸರ್ಕಾರ ಅವರ ಕಲಾ ಸೇವೆಯನ್ನು ಗುರುತಿಸಿ 1992 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗೆ ಅವರು 2017 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದರು. 

ವಿಶ್ವನಾಥ್ ಅವರು ಶಂಕರಾಭರಣಂ ಸಿನಿಮಾಗೆ ರಾಷ್ಟ್ರೀಯ ಫಿಲ್ಮ್ ಅವಾರ್ಡ್ ನ್ನೂ ಪಡೆದಿದ್ದರು ಹಾಗೂ ಸಪ್ತಪದಿ ಸಿನಿಮಾಗೆ ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗಿಸ್ ದತ್ ಪ್ರಶಸ್ತಿಗೂ ಭಾಜನರಾಗಿದ್ದರು. ಖ್ಯಾತ ಸಂಗೀತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್ ಪಿ ಶೈಲಜಾ, ನಟ ಚಂದ್ರಮೋಹನ್ ವಿಶ್ವನಾಥ್ ಅವರ ಸಂಬಂಧಿಗಳಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com