ವಿಜಯ ರಾಘವೇಂದ್ರ, ಹರ್ಷಿಕಾ ಪೂಣಚ್ಚ ನಟನೆಯ ‘ಕಾಸಿನಸರ‘ ಸಿನಿಮಾ ಮಾರ್ಚ್ 3ಕ್ಕೆ ಬಿಡುಗಡೆ
ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಹೊಸ ಸಿನಿಮಾ ‘ಕಾಸಿನಸರ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
Published: 01st March 2023 05:15 PM | Last Updated: 01st March 2023 05:15 PM | A+A A-

ವಿಜಯ್ ರಾಘವೇಂದ್ರ - ಹರ್ಷಿಕಾ ಪೂಣಚ್ಚ
ಬೆಂಗಳೂರು: ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಹೊಸ ಸಿನಿಮಾ ‘ಕಾಸಿನಸರ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಸಿನಿಮಾದಲ್ಲಿ ನಟ ವಿಜಯ ರಾಘವೇಂದ್ರ ಅವರು ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ನಟಿ ಹರ್ಷಿಕಾ ಪೂಣಚ್ಚ ‘ಸಂಪಿಗೆ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿದೆ.
‘ನಾವೆಷ್ಟೇ ಆಧುನಿಕತೆಗೆ ತೆರೆದುಕೊಂಡರೂ, ಕೃತಕ ಬುದ್ಧಿಮತ್ತೆ ಎಷ್ಟೇ ಅಭಿವೃದ್ಧಿಯಾದರೂ, ಬೇರು ಹುಡುಕುತ್ತ ಹಳ್ಳಿಗೇ ಬರಬೇಕು. ಅಲ್ಲಿ ಬದುಕುವ ರೈತರ ಬದುಕನ್ನು ಕಾಣಬೇಕು. ಕಲಾವಿದನಾಗಿ ನಾನು ಹಲವು ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈ ಪಾತ್ರ ಬಹಳ ಗಂಭೀರವಾದದ್ದು. ಇದೇ ಮೊದಲ ಬಾರಿಗೆ ನಾನು ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ನಟ ವಿಜಯ ರಾಘವೇಂದ್ರ.
'ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ. ಶ್ರೀಧರ್ ಸಂಭ್ರಮ್ ಅವರು ಭರಣಿಯ ಮಳೆ ಹೊಯ್ದು ಹಾಡನ್ನು ಅದ್ಭುತವಾಗಿ ಮಾಡಿದ್ದಾರೆ. ವೇಣು ಚಿತ್ರವನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಚಿತ್ರದಲ್ಲಿ ಸುಂದರೇಶ ಎಂಬ ವ್ಯವಸಾಯದ ಮೇಲೆ ಭರವಸೆ ಇಟ್ಟಿರುವ ರೈತ ಹೋರಾಟಗಾರನಾಗಿ ನಟಿಸಿದ್ದೇನೆ ಎಂದರು.

ಗ್ರಾಮೀಣ ಭಾಗದಿಂದಲೇ ಬಂದ ದೊಡ್ಡನಾಗಯ್ಯ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಶ್ವತ್ಥ್ ನೀನಾಸಂ, ಉಮಾಶ್ರೀ, ಸಂಗೀತಾ, ಸುಧಾ ಬೆಳವಾಡಿ, ಹನುಮಂತೇಗೌಡ ಮುಂತಾದವರು ನಟಿಸಿದ್ದು, ವೇಣು ಅವರ ಛಾಯಾಗ್ರಹಣ ಮತ್ತು ಶ್ರೀಧರ್ ಸಂಭ್ರಮ್ ಅವರ ಸಂಗೀತ ಚಿತ್ರಕ್ಕಿದೆ.