ಭಾರತದ 'RRR', 'ದಿ ಎಲಿಫೆಂಟ್ ವಿಸ್ಪರರ್ಸ್' ಗೆ ಆಸ್ಕರ್ ಪ್ರಶಸ್ತಿ; ಇಲ್ಲಿದೆ 95ನೇ ಅಕಾಡೆಮಿ ಆವಾರ್ಡ್ಸ್ ಪುರಸ್ಕೃತರ ಪಟ್ಟಿ
ಭಾರತದ RRR ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನಾನಾ ಚಿತ್ರಗಳು 95ನೇ ಆಸ್ಕರ್ ಅಕಾಡೆಮಿ ಆವಾರ್ಡ್ಸ್ ಪ್ರಶಸ್ತಿಗೆ ಭಾಜನವಾಗಿದ್ದು, ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.
Published: 13th March 2023 02:22 PM | Last Updated: 13th March 2023 05:49 PM | A+A A-

RRR ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಗೆ ಆಸ್ಕರ್ ಪ್ರಶಸ್ತಿ
ನವದೆಹಲಿ: ಭಾರತದ RRR ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನಾನಾ ಚಿತ್ರಗಳು 95ನೇ ಆಸ್ಕರ್ ಅಕಾಡೆಮಿ ಆವಾರ್ಡ್ಸ್ ಪ್ರಶಸ್ತಿಗೆ ಭಾಜನವಾಗಿದ್ದು, ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.
ಭಾನುವಾರ ಸಂಜೆ ಇಲ್ಲಿನ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಸಿನಿಮಾ ತಾರೆಯರು, ತಂತ್ರಜ್ಞರು ಸೇರಿದಂತೆ ಸಿನಿಮಾ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.
'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಸಿನಿಮಾವು 95ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿ ಇತಿಹಾಸ ಬರೆದಿದ್ದು, ಎಸ್.ಎಸ್ ರಾಜಮೌಳಿ ನಿರ್ದೇಶನದ ತೆಲುಗಿನ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು‘ ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದಿದೆ. ಚಂದ್ರಬೋಸ್ ಬರೆದಿರುವ ‘ನಾಟು ನಾಟು‘ ಹಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದು, ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಟು-ನಾಟು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಉಳಿದಂತೆ ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ದು, ಇದೇ ಮೊದಲ ಸಲ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದಿರುವುದು ವಿಶೇಷವಾಗಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.
1.ಅತ್ಯುತ್ತಮ ಚಿತ್ರ: ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
2.ಅತ್ಯುತ್ತಮ ನಿರ್ದೇಶಕ: ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)
3.ಅತ್ಯುತ್ತಮ ನಟಿ: ಮಿಶೆಲ್ ಯೋಹ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)
4.ಅತ್ಯುತ್ತಮ ನಟ: ಬ್ರೆಂಡನ್ ಫ್ರೇಸರ್- (ದಿ ವೇಲ್)
5.ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ)
6.ಅತ್ಯುತ್ತಮ ಪೋಷಕ ನಟ: ಕೆ ಹುಯ್ ಕ್ವಾನ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)
7.ಅತ್ಯುತ್ತಮ ಪೋಷಕ ನಟಿ: ಜೇಮಿ ಲೀ ಕರ್ಟಿಸ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)
8.ಅತ್ಯುತ್ತಮ ಹಾಡು: ನಾಟು ನಾಟು (ಆರ್‌ಆರ್‌ಆರ್–ತೆಲುಗು)
9.ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ಅವತಾರ್-ದಿ ವೇ ಆಫ್ ವಾಟರ್
10.ಅತ್ಯುತ್ತಮ ಧ್ವನಿ ವಿನ್ಯಾಸ: ಟಾಪ್ ಗನ್ - ಮೇವರಿಕ್.
11.ಅತ್ಯುತ್ತಮ ಸಂಕಲನ: ಪೌಲ್ ರಾಗರ್ಸ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)
12.ಅತ್ಯುತ್ತಮ ಛಾಯಾಗ್ರಹಣ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್
13.ಅತ್ಯುತ್ತಮ ಮೂಲ ಚಿತ್ರಕಥೆ: ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
14.ಅತ್ಯುತ್ತಮ ಸಾಕ್ಷ್ಯಚಿತ್ರ: ನವಲ್ನಿ
15.ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ.
16.ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ದಿ ವೇಲ್
17.ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ‘ದಿ ಎಲಿಫೆಂಟ್ ವಿಸ್ಪರರ್ಸ್ (ತಮಿಳು)