ಕರ್ನಾಟಕ ವಿಧಾನಸಭೆ ಚುನಾವಣೆ; ರಿಷಬ್ ಶೆಟ್ಟಿ, ಪ್ರಕಾಶ್ ರಾಜ್, ಯಶ್ ಸೇರಿ ಸ್ಯಾಂಡಲ್‌ವುಡ್ ತಾರೆಯರಿಂದ ಮತದಾನ

ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಹಲವಾರು ಸೆಲೆಬ್ರಿಟಿಗಳು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು. ನಟ-ನಿರ್ದೇಶಕ ರಿಷಬ್ ಶೆಟ್ಟಿಯಿಂದ ಹಿಡಿದು ಪ್ರಕಾಶ್ ರಾಜ್‌ವರೆಗೆ ಇತರ ನಟ-ನಟಿಯರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.
ರಿಷಭ್ ಶೆಟ್ಟಿ - ಪ್ರಕಾಶ್ ರಾಜ್ - ಯಶ್
ರಿಷಭ್ ಶೆಟ್ಟಿ - ಪ್ರಕಾಶ್ ರಾಜ್ - ಯಶ್

ಬೆಂಗಳೂರು: ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಹಲವಾರು ಸೆಲೆಬ್ರಿಟಿಗಳು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು. ನಟ-ನಿರ್ದೇಶಕ ರಿಷಬ್ ಶೆಟ್ಟಿಯಿಂದ ಹಿಡಿದು ಪ್ರಕಾಶ್ ರಾಜ್‌ವರೆಗೆ ಇತರ ನಟ-ನಟಿಯರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.

'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಮತದಾನ ಮಾಡಿದರು.

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ನಟ, 'ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಅದೇ ರೀತಿ ಮತದಾನವು ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಜವಾಬ್ದಾರಿಯೂ ಆಗಿದೆ.. ನಾನು ನಮ್ಮ ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ಮತ ಹಾಕಿದ್ದೇನೆ' ಎಂದು ಬರೆದಿದ್ದಾರೆ.

ನಟ ಪ್ರಕಾಶ್ ರಾಜ್ ಅವರು ಮತ ಚಲಾಯಿಸಿ, 'ನನ್ನ ಪ್ರೀತಿಯ ಕನ್ನಡಿಗರೆ.. ನಾನು ಮತೀಯ ರಾಜಕಾರಣದ ವಿರುದ್ಧ.. 40 % ಭ್ರಷ್ಟಾರಿಗಳ ವಿರುದ್ಧ ನನ್ನ ಮತ ಚಲಾಯಿಸಿದ್ದೇನೆ.. ನೀವು ನಿಮ್ಮ ಮನಃಸಾಕ್ಷಿಯಿಂದ, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಲು ನಿಮ್ಮ ಮತವನ್ನು ಚಲಾಯಿಸಿ' ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.  

ಬೆಂಗಳೂರಿನ ಶಾಂತಿನಗರದಲ್ಲಿರುವ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಕಾಶ್ ರಾಜ್ ಅವರು ಮತ ಚಲಾಯಿಸಿದರು.

ಬೆಂಗಳೂರಿನ ಆರ್‌ಆರ್ ನಗರದ ಮತಗಟ್ಟೆಗೆ ನಟ ಗಣೇಶ್ ಅವರು ತಮ್ಮ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದರು. ನಟಿ ಅಮೂಲ್ಯ ಕೂಡ ತಮ್ಮ ಪತಿಯೊಂದಿಗೆ ಬಂದು ಮತ ಚಲಾಯಿಸಿದರು.

ಜವಾಬ್ದಾರಿಯುತ ನಾಗರಿಕರಾಗಿ, ನಟ ರಮೇಶ್ ಅರವಿಂದ್ ಮತ್ತು ಅವರ ಪತ್ನಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮಾಡಿದರು. ನಟ ಕಿಚ್ಚ ಸುದೀಪ್ ಕೂಡ ಮತದಾನ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು.

ಇನ್ನೊಂದೆಡೆ ಕೆಜಿಎಫ್ ಖ್ಯಾತಿಯ ನಟ ಯಶ್ ಕೂಡ ಮತ ಚಲಾಯಿಸಿದರು. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಕೂಡ ಮತ ಚಲಾಯಿಸಿದರು.

ಪ್ರಸ್ತುತ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಾರತದ ಚುನಾವಣಾ ಆಯೋಗದ ಪ್ರಕಾರ, ಸರ್ಕಾರ ರಚಿಸಲು 113 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಅಗತ್ಯವಿದೆ. 

ಈ ಬಾರಿಯ ವಿಧಾನಸಭೆ ಚುನಾವಣೆಗೆ ಒಟ್ಟು 42,48,028 ಹೊಸ ಮತದಾರರು ಇದ್ದಾರೆ. ರಾಜ್ಯದಲ್ಲಿ ವರುಣಾ, ಕನಕಪುರ, ಶಿಗ್ಗಾಂವಿ, ಹುಬ್ಬಳ್ಳಿ-ದಾರವಾಡ, ಚನ್ನಪಟ್ಟಣ, ಶಿಕಾರಿಪುರ, ಚಿತ್ತಾಪುರ, ರಾಮನಗರ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಹೈವೋಲ್ಟೇಜ್ ಕಣಗಳಾಗಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕೆ ಸುಧಾಕರ್ ಮತ್ತು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರು ಮತದಾನ ಆರಂಭದಲ್ಲಿಯೇ ತಮ್ಮ ಮತ ಚಲಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com