ಜಿಯೋ MAMI ಚಿತ್ರೋತ್ಸವದಲ್ಲಿ ವರ್ಲ್ಡ್ ಪ್ರೀಮಿಯರ್‌ ಆಗಲಿದೆ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ 'ಮಿಥ್ಯ' ಸಿನಿಮಾ

ಅಕ್ಟೋಬರ್ 27ರಿಂದ ನವೆಂಬರ್ 5 ರವರೆಗೆ ನಡೆಯಲಿರುವ ಜಿಯೋ ಎಂಎಎಂಐ ಮುಂಬೈ ಫಿಲ್ಮ್ ಫೆಸ್ಟಿವಲ್‌ನಲ್ಲಿ ವರ್ಲ್ಡ್ ಪ್ರೀಮಿಯರ್‌ ಆಗುತ್ತಿರುವ 250 ಚಲನಚಿತ್ರಗಳಲ್ಲಿ ನಟ ರಕ್ಷಿತ್ ಶೆಟ್ಟಿಯವರ ಪರಂವಃ ಪಿಕ್ಚರ್ಸ್ ನಿರ್ಮಿಸಿರುವ 'ಮಿಥ್ಯ' ಸಿನಿಮಾ ಕೂಡ ಸೇರಿದೆ. 
ಮಿಥ್ಯ ಸಿನಿಮಾದ ಸ್ಟಿಲ್
ಮಿಥ್ಯ ಸಿನಿಮಾದ ಸ್ಟಿಲ್
Updated on

ಅಕ್ಟೋಬರ್ 27ರಿಂದ ನವೆಂಬರ್ 5 ರವರೆಗೆ ನಡೆಯಲಿರುವ ಜಿಯೋ ಎಂಎಎಂಐ ಮುಂಬೈ ಫಿಲ್ಮ್ ಫೆಸ್ಟಿವಲ್‌ನಲ್ಲಿ ವರ್ಲ್ಡ್ ಪ್ರೀಮಿಯರ್‌ ಆಗುತ್ತಿರುವ 250 ಚಲನಚಿತ್ರಗಳಲ್ಲಿ ನಟ ರಕ್ಷಿತ್ ಶೆಟ್ಟಿಯವರ ಪರಂವಃ ಪಿಕ್ಚರ್ಸ್ ನಿರ್ಮಿಸಿರುವ 'ಮಿಥ್ಯ' ಸಿನಿಮಾ ಕೂಡ ಸೇರಿದೆ. ಈ ವರ್ಷ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಉದಯೋನ್ಮುಖ ಮತ್ತು ಸಮಕಾಲೀನ ಪ್ರತಿಭೆಗಳನ್ನು ಪ್ರದರ್ಶಿಸಲು ಚಿತ್ರೋತ್ಸವವು ವಿಶೇಷವಾಗಿ ಗಮನ ಹರಿಸಿದೆ. 

'ಮಿಥ್ಯ' ಇದೇ ಮೊದಲ ಬಾರಿಗೆ ವರ್ಲ್ಡ್ ಪ್ರೀಮಿಯರ್‌ಗೆ ಆಯ್ಕೆಯಾದ 40 ಚಲನಚಿತ್ರಗಳಲ್ಲಿ ಒಂದಾಗಿದೆ. ಇದಲ್ಲದೆ, ಚಿತ್ರೋತ್ಸವವು ಹೆಚ್ಚುವರಿಯಾಗಿ 45 ಏಷ್ಯಾ ಪ್ರೀಮಿಯರ್‌ಗಳು ಮತ್ತು 70 ಕ್ಕೂ ಹೆಚ್ಚು ದಕ್ಷಿಣ ಏಷ್ಯಾ ಪ್ರೀಮಿಯರ್‌ಗಳನ್ನು ಒಳಗೊಂಡಿದೆ. ಈ ಪ್ರದರ್ಶನಕ್ಕೆ 1000ಕ್ಕಿಂತ ಹೆಚ್ಚು ಸಿನಿಮಾಗಳು ಅರ್ಜಿ ಸಲ್ಲಿಸಿದ್ದವು. 

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸುಮಂತ್ ಭಟ್ ಅವರು ಸಿನಿಮಾ ನಿರ್ಮಾಪಕ ಮತ್ತು ಪರಂವಃ ಪಿಕ್ಚರ್ಸ್‌ನ ಬರವಣಿಗೆ ತಂಡದ ಸದಸ್ಯರಾಗಿದ್ದಾರೆ. ಇನ್ನೂ ಬಿಡುಗಡೆಯಾಗಬೇಕಿರುವ 'ಏಕಂ' ವೆಬ್ ಸರಣಿಗಾಗಿ ಏಳು ಸಂಚಿಕೆಗಳನ್ನು ಬರೆದಿದ್ದಾರೆ. ಮಿಥ್ಯ ಅವರ ಚೊಚ್ಚಲ ಸಿನಿಮಾವಾಗಿದೆ. 'ಚಿತ್ರವು ತನ್ನ ಹೆತ್ತವರನ್ನು ಕಳೆದುಕೊಂಡ 11 ವರ್ಷದ ಬಾಲಕನ ಕಥೆಯಾಗಿದೆ. ತನ್ನ ತಂದೆ-ತಾಯಿಯನ್ನು ಕಳೆದುಕೊಂಡು, ಆ ನೋವಿನಿಂದ ಹೊರಬರಲಾರದ ಬಾಲಕ, ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ’.

<strong>ಸುಮಂತ್ ಭಟ್ - ರಕ್ಷಿತ್ ಶೆಟ್ಟಿ</strong>
ಸುಮಂತ್ ಭಟ್ - ರಕ್ಷಿತ್ ಶೆಟ್ಟಿ

'ದಂಪತಿಗಳ ಮರಣವು ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತದೆ. ಮಕ್ಕಳು ಆ ನಷ್ಟವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಅವರ ಗಾಯಗಳು ವಾಸಿಯಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಪ್ರಶ್ನೆಗಳನ್ನು ಸಿನಿಮಾ ಹುಟ್ಟುಹಾಕುತ್ತದೆ. ಈ ಪ್ರಶ್ನೆಗಳನ್ನು ಅನ್ವೇಷಿಸುವ ಗುರಿಯನ್ನು ಮಿಥ್ಯ ಹೊಂದಿದೆ' ಎಂದು ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿಯನ್ನು ನಿಭಾಯಿಸಿರುವ ಸುಮಂತ್ ಹೇಳುತ್ತಾರೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮತ್ತು ‘ವಿಕ್ರಾಂತ್​ ರೋಣ’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್​ ಶೆಟ್ಟಿ ‘ಮಿಥ್ಯ’ ಚಿತ್ರದಲ್ಲಿ ಮಿಥುನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಪ್ರಕಾಶ್ ತೂಮಿನಾಡ್ ಮತ್ತು ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ನಮ್ಮ ಸಿನಿಮಾ ಇಂಡಸ್ಟ್ರಿಗೆ ಎಲ್ಲ ರೀತಿಯ ಚಿತ್ರಗಳು ಅಗತ್ಯವಿದೆ. ಸಿನಿಮಾ ನಿರ್ಮಾಣಕ್ಕೆ ಹೊಸ ದೃಷ್ಟಿಕೋನಗಳನ್ನು ತರುವ ಹೊಸ ಕಥೆಗಳು ಮತ್ತು ಹೊಸ ಕಾಲದ ಕಥೆಗಾರರನ್ನು ನಾವು ಸ್ವಾಗತಿಸಬೇಕಾಗಿದೆ' ಎಂದು ನಿರ್ಮಾಪಕ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಚಿತ್ರಕ್ಕೆ ಮಿಧುನ್ ಮುಕುಂದನ್ ಅವರ ಸಂಗೀತ, ಉದಿತ್ ಖುರಾನಾ ಅವರ ಛಾಯಾಗ್ರಹಣ ಮತ್ತು ಶ್ರೀಯಾಂಕ್ ನಂಜಪ್ಪ ಅವರ ಧ್ವನಿ ವಿನ್ಯಾಸವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com