ಬಂಗಲೆ ಶಾಮ ರಾವ್ ದ್ವಾರಕನಾಥ್, ದ್ವಾರಕೀಶ್ ಆಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಗಳಿಸಿರುವ ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ್. ಹಾಸ್ಯ ನಟರಾಗಿ, ನಿರ್ಮಾಪಕರಾಗಿ, ಹಲವಾರು ಭಾಷೆಯಲ್ಲಿ ನಟಿಸಿರುವ ಇವರಿಗೆ ದ್ವಾರಕೀಶ್ ಎಂದು ಹೆಸರು ಇಟ್ಟಿದ್ದು ಬೇರೆ ಯಾರೂ ಅಲ್ಲ ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ ಸಿ.ವಿ ಶಿವಶಂಕರ್.
ದ್ವಾರಕೀಶ್
ದ್ವಾರಕೀಶ್
Updated on

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಗಳಿಸಿರುವ ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ್. ಹಾಸ್ಯ ನಟರಾಗಿ, ನಿರ್ಮಾಪಕರಾಗಿ, ಹಲವಾರು ಭಾಷೆಯಲ್ಲಿ ನಟಿಸಿರುವ ಇವರಿಗೆ ದ್ವಾರಕೀಶ್ ಎಂದು ಹೆಸರು ಇಟ್ಟಿದ್ದು ಬೇರೆ ಯಾರೂ ಅಲ್ಲ ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ ಸಿ.ವಿ ಶಿವಶಂಕರ್.

ಕನ್ನಡ ಚಿತ್ರೋದ್ಯಮದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಬಣ್ಣದ ಪ್ರಪಂಚಕ್ಕೆ ಬಂದ ದ್ವಾರಕೀಶ್ ಅವರು, ಸಿನಿಮಾ ರಂಗದ ನಾನಾ ವಿಭಾಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ಕೇವಲ ನಟರಾಗಿ ಮಾತ್ರ ಉಳಿಯದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ ಅನೇಕ ಕಲಾವಿದರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದವರು.

ಮೈಸೂರಿನ ಶಾರದಾ ವಿಲಾಸ್ ಮತ್ತು ಬಾನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ದ್ವಾರಕೀಶ್, ಸಿಪಿಸಿ ಪಾಲಿಟೆಕ್ನಿಕ್ ಜೊತೆ ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಮೈಸೂರಿನಲ್ಲಿ ಭಾರತ್ ಆಟೋ ಸ್ಪೇರ್ಸ್ ಅಂಗಡಿಯಿಂದ ವ್ಯಾಪಾರ ಶುರು ಮಾಡಿದ್ದರು. ಆನಂತರ ಸಿನಿಮಾ ರಂಗಕ್ಕೆ ಬಂದವರು.

ದ್ವಾರಕೀಶ್ ಅವರ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಅವರು. ಅವರನ್ನು ಒಪ್ಪಿಸುವ ಮೂಲಕ 1963ರಲ್ಲಿ ದ್ವಾರಕೀಶ್ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು. ಹಾಸ್ಯನಟ, ಸಹನಟಾಗಿ ಕೆಲಸ ಮಾಡುತ್ತಿದ್ದವರು, ಏಕಾಏಕಿ 1966ರಲ್ಲಿ ಮಮತೆಯ ಬಂಧನ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾದವರು.

ದ್ವಾರಕೀಶ್
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ

ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆಯೇ ಮತ್ತೆ 1969ರಲ್ಲಿ ಮೇಯರ್ ಮುತ್ತಣ್ಣ ಚಿತ್ರವನ್ನು ತಮ್ಮದೇ ದ್ವಾರಕಾ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹೀರೋ, ಭಾರತಿ ನಾಯಕಿ. ಇದು ಕೂಡ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಪ್ರದರ್ಶನ ಕಂಡಿತು.

ನಟರಾಗಿ ಜನ್ಮ ರಹಸ್ಯ, ಮಂಕುತಿಮ್ಮ, ಪೆದ್ದ ಗೆದ್ದ, ಕಿಟ್ಟು ಪುಟ್ಟಿ, ಸಿಂಗಾಪುರದಲ್ಲಿ ರಾಜಾಕುಳ್ಳ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶಿಲಾ, ಆಪ್ತಮಿತ್ರ, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಪ್ರಪಂಚ ಕುಳ್ಳ, ಗುರು ಶಿಷ್ಯರು, ಕಳ್ಳ ಕಳ್ಳು ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. 1978 ರಲ್ಲಿ ಬಿಡುಗಡೆಯಾದ ಸಿಂಗಾಪುರದಲ್ಲಿ ರಾಜಕುಳ್ಳ ಸಾಕಷ್ಟು ಹೆಸರು ಗಳಿಸಿತ್ತು, ಭಾರತದ ಹೊರಗೆ ಚಿತ್ರೀಕರಣ ನಡೆಸಿದ ಕನ್ನಡದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ದ್ವಾರಕೀಶ್ ಪಾತ್ರರಾಗಿದ್ದರು. ಇದಾದ ಬಳಿಕ ಆಫ್ರಿಕಾದಲ್ಲಿ ಶೀಲಾ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ನಂತರ 1974ರಲ್ಲಿ ವಿಷ್ಣುವರ್ಧನ್ ಅವರ ಜೊತೆಯಾಗಿ ಸಿನಿಮಾ ಮಾಡಲು ಮುಂದಾದರು. ಕಳ್ಳ ಕುಳ್ಳ ಸಿನಿಮಾದಿಂದ ಶುರುವಾದ ಇವರಿಬ್ಬರ ಪಯಣ, ಆಪ್ತಮಿತ್ರ ಚಿತ್ರದವರೆಗೂ ಮುಂದುವರೆದಿತ್ತು. ಈ ನಡುವೆ ವಿಷ್ಣು ಮತ್ತು ದ್ವಾರಕೀಶ್ ನಡುವೆ ಮನಸ್ತಾಪ ಮೂಡಿ ಹತ್ತು ವರ್ಷಗಳ ಕಾಲ ದೂರವಿದ್ದರು.

ದ್ವಾರಕೀಶ್ ಅವರು ಅಂಬರೀಶ್, ರಜನಿಕಾಂತ್, ಚಿರಂಜೀವಿ, ಶಶಿಕುಮಾರ್, ವಿನೋದ್ ರಾಜ್, ದರ್ಶನ್ ಮತ್ತು ಸುದೀಪ್ ಅವರಂತಹ ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ. ನರಸಿಂಹರಾಜು ಮತ್ತು ಬಾಲಕೃಷ್ಣರಂತಹ ದಿಗ್ಗಜರೊಂದಿಗೆ ಹಾಸ್ಯ ಪಾತ್ರಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದರು.

ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ದ್ವಾರಕೀಶ್ ಅವರ ಸಾಧನೆಯನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್‌ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com