
ಟೋಬಿ ಖ್ಯಾತಿಯ ನಟಿ ಚೈತ್ರಾ ಜೆ ಆಚಾರ್ ಇತ್ತೀಚೆಗಷ್ಟೇ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರತಂಡ ಸೇರಿಕೊಂಡಿದ್ದು, ಲಚ್ಚಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜಕುಮಾರ್ ಕೂಡ ನಟಿಸಿದ್ದಾರೆ. ಮಲಯಾಳಂನ ಖ್ಯಾತ ನಿರ್ಮಾಪಕ ಮತ್ತು ನಟ ವಿಜಯ್ ಬಾಬು ಉತ್ತರಕಾಂಡದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟಿ ರಮ್ಯಾ ಅವರು ಉತ್ತರಕಾಂಡ ಚಿತ್ರದಿಂದ ಹೊರನಡೆದ ಬಳಿಕ ಚಿತ್ರತಂಡವು ನಾಯಕಿ ಹುಡುಕಾಟದಲ್ಲಿ ತೊಡಗಿದ್ದು, ಇದೀಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಟಿ ಐಶ್ವರ್ಯಾ ರಾಜೇಶ್ ಉತ್ತರಕಾಂಡ ಸಿನಿಮಾದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.
ಮೂಲಗಳ ಪ್ರಕಾರ, ಕೆಆರ್‌ಜಿ ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್) ಪ್ರೊಡಕ್ಷನ್ ಹೌಸ್ ಇದೀಗ ನಟಿಯೊಂದಿಗೆ ಮಾತುಕತೆ ನಡೆಸುತ್ತಿದೆ. ಒಪ್ಪಂದ ಬಹುತೇಕ ಅಂತಿಮಗೊಂಡಿದ್ದು, ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ.
ಐಶ್ವರ್ಯಾ ರಾಜೇಶ್ ಅವರು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದ ನಟಿಯಾಗಿದ್ದಾರೆ. ಕಾಕ ಮುತ್ತೈನಲ್ಲಿನ ಪಾತ್ರಕ್ಕಾಗಿ ಖ್ಯಾತಿ ಗಳಿಸಿದರು. ಧನುಷ್ ಜೊತೆಗೆ ವೆಟ್ರಿಮಾರನ್ ಅವರ ವಡಾ ಚೆನ್ನೈ, ಕ್ರೀಡಾ ಆಧಾರಿತ ಕನಾ, ಶಿವಕಾರ್ತಿಕೇಯನ್ ಅಭಿನಯದ ನಮ್ಮ ವೀಟ್ಟು ಪಿಳ್ಳೈ ಮತ್ತು ವಿಜಯ್ ಸೇತುಪತಿ ನಟನೆಯ ಕಾ ಪೇ ರಣಸಿಂಗಂನಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೂಡ ತಮ್ಮದೇ ಛಾಪು ಮೂಡಿಸಿರುವ ಅವರು ಉತ್ತರಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ನಡೆಯುವ ಚಿತ್ರ ಉತ್ತರಕಾಂಡದಲ್ಲಿ ಗಬ್ರು ಸತ್ಯ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಇದೀಗ ಧನಂಜಯ್ ಮತ್ತು ಐಶ್ವರ್ಯಾ ರಾಜೇಶ್‌ರ ಸಂಭಾವ್ಯ ಆನ್-ಸ್ಕ್ರೀನ್ ಜೋಡಿಯೊಂದಿಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
Advertisement