ಚೆನ್ನೈ: ಭಾರತದಲ್ಲಿ "MeToo" ಆಂದೋಲನದ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ, MeToo ಆರೋಪ ಮಾಡಿ ಸಾಕಷ್ಟು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripaada), 'MeToo ಆರೋಪ ಮಾಡಿ ಸಾಕಷ್ಟು ಕಳೆದುಕೊಂಡಿದ್ದೇನೆ. ಸಾಕಷ್ಟು ಅವಕಾಶಗಳು ನನ್ನ ಕೈಯಿಂದ ಜಾರಿಹೋಗಿದ್ದು, ಕೆಲವರು ಉದ್ದೇಶಪೂರ್ವಕವಾಗಿಯೇ ನನ್ನ ಕೆಲಸ ಕಸಿದಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಜೀವನೋಪಾಯದ ನಷ್ಟ ಮತ್ತು ಲೈಂಗಿಕ ಅಪರಾಧಗಳನ್ನು ಸಾಬೀತುಪಡಿಸುವಲ್ಲಿನ ಸವಾಲುಗಳು ಸೇರಿದಂತೆ ಸಂತ್ರಸ್ಥರು ನ್ಯಾಯವನ್ನು ಪಡೆಯುವಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಚಿನ್ಮಯಿ ಎತ್ತಿ ತೋರಿಸಿದ್ದಾರೆ.
ಗೀತರಚನೆಕಾರ ವೈರಮುತ್ತು ಮತ್ತು ನಟ ರಾಧಾ ರವಿ ವಿರುದ್ಧ ಕಿರುಕುಳದ ಆರೋಪಗಳನ್ನು ಹೊರಿಸಿದ ನಂತರ ಡಬ್ಬಿಂಗ್‌ನಿಂದ ನಿಷೇಧಕ್ಕೊಳಗಾದ ಮತ್ತು ತಮ್ಮ ಗಾಯನ ವೃತ್ತಿಜೀವನದ ಸಂಕಷ್ಟಗಳನ್ನು ಚಿನ್ಮಯ್ ಹೇಳಿಕೊಂಡಿದ್ದು, ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತ್ವರಿತ ಮತ್ತು ಸೂಕ್ಷ್ಮ ನ್ಯಾಯ ವ್ಯವಸ್ಥೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
'ಈ ವ್ಯವಸ್ಥೆಯು ಸಂತ್ರಸ್ಥರಿಗೆ ಪೊಲೀಸ್ ದೂರುಗಳನ್ನು ಸಲ್ಲಿಸಲು ಕಷ್ಟಕರವಾಗಿಸುತ್ತದೆ, ಹಲವಾರು ವರ್ಷಗಳ ಹಿಂದೆ ಕಿರುಕುಳಕ್ಕೊಳಗಾದ ತನ್ನ ಸ್ವಂತ ಅನುಭವವನ್ನು ಮತ್ತು ಆ ಸಮಯದಲ್ಲಿ ಸುತ್ತಮುತ್ತಲಿನ ಪೊಲೀಸ್ ಠಾಣೆಗಳ ಅಲೆದಾಟ, ದೀರ್ಘಾವಧಿಯ ವಿಚಾರಣೆ ಸವಾಲಿನದ್ದಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡಿದ ಕೇರಳದ ನಟರನ್ನು ಶ್ಲಾಘಿಸಿದ ಚಿನ್ಮಯಿ, ಉದ್ಯಮದಲ್ಲಿರುವ ಇತರ ಜನರು ಇದನ್ನು ಅನುಸರಿಸಬೇಕು. ನಮಗೆ ಮೊದಲಿನಿಂದಲೂ ತ್ವರಿತವಾದ ಸೂಕ್ಷ್ಮ ಕಾನೂನು ವ್ಯವಸ್ಥೆ ಬೇಕು. ನಾವು ಎಲ್ಲಾ ಸಮಯದಲ್ಲೂ ಬಾಡಿಕ್ಯಾಮ್ ಧರಿಸಿರಲು ಸಾಧ್ಯವಿಲ್ಲ. ಕಿರುಕುಳದಂತಹ ಉಲ್ಲಂಘನೆಗಳು ಕ್ಷಣಾರ್ಧದಲ್ಲಿ ಸಂಭವಿಸುತ್ತವೆ.
ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಿಂದ ಬಹಳಷ್ಟು ನಿರೀಕ್ಷೆ ಇದೆ. ಲೈಂಗಿಕ ಕಿರುಕುಳ ಆರೋಪಗಳನ್ನು ಎದುರಿಸುತ್ತಿರುವ ಪುರುಷರನ್ನು ರಾಜಕಾರಣಿಗಳು ಬೆಂಬಲಿಸುತ್ತಾರೆ. ಏಕೆಂದರೆ ಅವರು ಮತ ಬ್ಯಾಂಕ್ ಆಗಿದ್ದಾರೆ" ಎಂದು ಕಿಡಿಕಾರಿದ್ದಾರೆ.
Advertisement