
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದು, ಈ ನಡುವಲ್ಲೇ ದರ್ಶನ್ ಅಭಿನಯದ ಕರಿಯ ಚಿತ್ರ ಆಗಸ್ಟ್ 30ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ.
ಈ ಕುರಿತು ಇತ್ತೀಚೆಗಷ್ಟೇ ನಿರ್ದೇಶಕ ಪ್ರೇಮ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದು, ಭಾರತೀಯ ಚಿತ್ರರಂಗದಲ್ಲಿ ಇದೊಂದು ಮೈಲಿಗಲ್ಲು, ಕರಿಯ ಇದು ನಿಮ್ಮಿಂದ. ಅಭಿಮಾನಿಗಳು ಶಾಂತಿ, ತಾಳ್ಮೆ ಹಾಗೂ ಪ್ರೀತಿಯಿಂದ ಕರಿಯನನ್ನು ಹರಸಿ ಹಾರೈಸಿ. ಯಾವುದೇ ಅತಿರೇಕಗಳನ್ನು ಮಾಡಬೇಡಿ. ನಿಮ್ಮ ಆನ್‌ಲೈನ್ ಬರವಣಿಗೆಗಳು ಬೇರೆಯವರಿಗೆ ನೋವುತರದಿರಲಿ. ದರ್ಶನ್ ಅವರು ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ, ನಮ್ಮ ಜೊತೆ ಬೆರೆಯಲಿ, ಬೆಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
2003ರ ಜನವರಿ ತಿಂಗಳಲ್ಲಿ ಕರಿಯ ಸಿನಿಮಾ ಮೊದಲ ಬಾರಿ ಬಿಡುಗಡೆ ಆಗಿತ್ತು. ಖ್ಯಾತ ನಿರ್ದೇಶಕ ಪ್ರೇಮ್ ಅವರ ಮೊದಲ ಸಿನಿಮಾ ಇದಾಗಿತ್ತು. ದರ್ಶನ್ ಅವರಿಗೆ ನಾಯಕನಾಗಿ ಇದು ಐದನೇ ಸಿನಿಮಾ ಹಾಗೂ ಮೊದಲ ಬಲು ದೊಡ್ಡ ವಿಜಯ ತಂದುಕೊಟ್ಟ ಸಿನಿಮಾ ಆಗಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ 700 ದಿನಗಳ ಪ್ರದರ್ಶನ ಕಂಡಿತ್ತು. ಮೆಜೆಸ್ಟಿಕ್ ಚಿತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ದರ್ಶನ್ ಅವರಿಗೆ ಕರಿಯ ರೌಡಿಸಂ ಸಿನಿಮಾಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಿಬಿಟ್ಟಿತ್ತು.
ಇದೀಗ ಈ ಸಿನಿಮಾಮ ಮತ್ತೆ ಆಗಸ್ಟ್ 30 ರಂದು ಮರು ಬಿಡುಗಡೆ ಆಗುತ್ತಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.
ದರ್ಶನ್ ಜೈಲು ಸೇರಿದ ಬಿಡುಗಡೆ ಆಗುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಕೆಲ ವಾರದ ಹಿಂದೆ ದರ್ಶನ್ ನಟನೆಯ ‘ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ ಆಗಿತ್ತು. ಈ ಸಿನಿಮಾ ಉತ್ತಮ ಕಲೆಕ್ಷನ್ ಅನ್ನೇ ಮಾಡಿತ್ತು. ಇದೀಗ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಈ ಸಿನಿಮಾ ಸಹ ಉತ್ತಮ ಕಲೆಕ್ಷನ್ ಅನ್ನೇ ಮಾಡುವ ನಿರೀಕ್ಷೆ ಇದೆ.
Advertisement