
ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಎಜಾಜ್ ಖಾನ್ ಗೆ ಸಂಕಷ್ಟಗಳು ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಅಕ್ಟೋಬರ್ 8ರಂದು ಕಸ್ಟಮ್ಸ್ ಇಲಾಖೆಯು ಎಜಾಜ್ ಖಾನ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದು ಇದೀಗ ಎಜಾಜ್ ಖಾನ್ ಅವರ ಪತ್ನಿಯನ್ನು ಬಂಧಿಸಿದೆ. ಎಜಾಜ್ ಖಾನ್ ಪತ್ನಿಯಾಗಿರುವ ಫಾಲನ್ ಗುಲಿವಾಲಾ ಅವರ ಜೋಗೇಶ್ವರಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ನಂತರ ಕಸ್ಟಮ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಅಕ್ಟೋಬರ್‌ನಲ್ಲಿ ವೀರ ದೇಸಾಯಿ ರಸ್ತೆಯಲ್ಲಿರುವ ನಟನ ಕಚೇರಿ ಮೇಲೆ ಕಸ್ಟಮ್ಸ್ ಇಲಾಖೆ ದಾಳಿ ನಡೆಸಿತ್ತು. ಅಂದು ಪೊಲೀಸರು 35 ಲಕ್ಷ ಮೌಲ್ಯದ 10 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ನಂತರ ಫಾಲನ್ ಗುಳಿವಾಲಾ ಕೂಡ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಇಲಾಖೆ ಗುರುವಾರ ಜೋಗೇಶ್ವರಿಯಲ್ಲಿರುವ ಫಾಲನ್ ಗುಲಿವಾಲಿ ಫ್ಲಾಟ್ ಮೇಲೆ ದಾಳಿ ನಡೆಸಿತ್ತು. ಅಲ್ಲಿ 130 ಗ್ರಾಂ ಗಾಂಜಾ ಹಾಗೂ ಇತರೆ ಅಮಲು ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
2021ರಲ್ಲಿ ಮಾದಕವಸ್ತು ಪ್ರಕರಣದಲ್ಲಿ ಎಜಾಜ್ ಖಾನ್ ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು. ಆದರೆ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇನ್ನು ಇತ್ತೀಚೆಗೆ ಮುಂಬೈನ ವರ್ಸೋವಾದಿಂದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಜಾಜ್ ದಯನೀಯವಾಗಿ ಸೋತರು. ಆತ ಕೇವಲ 139 ಮತಗಳನ್ನು ಮಾತ್ರ ಪಡೆದರು.
ಎಜಾಜ್ ಅವರು ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಎಜಾಜ್ ಖಾನ್ ಅವರು ಕೆಲವೇ ಮತಗಳನ್ನು ಪಡೆದಿದ್ದು ಅವಮಾನಕ್ಕೊಳಗಾಗಿದ್ದರು. ಎಜಾಜ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ 56 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆದರೆ ಅವರಿಗೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
Advertisement