
ಚೌಕಿದಾರ್ ಚಿತ್ರಕ್ಕೆ ನಟಿ ಸುಧಾರಾಣಿಯವರು ಎಂಟ್ರಿ ಕೊಟ್ಟಿದ್ದು, ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಹುಡ್ಗಿ ಧನ್ಯಾ ರಾಮ್ ಕುಮಾರ್ ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ಲಕ್ಷ್ಮೀ ಮಹಾಲಕ್ಷ್ಮೀ ಸಿನಿಮಾ ಖ್ಯಾತಿಯ ಹಿರಿಯ ನಟಿ ಶ್ವೇತಾ, ಧರ್ಮ ಸೇರಿದಂತೆ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು. ಇದೀಗ ಈ ಚಿತ್ರತಂಡಕ್ಕೆ ನಟಿ ಸುಧಾರಾಣಿ ಕೂಡ ಸಾಥ್ ನೀಡುತ್ತಿದ್ದಾರೆ. ಪ್ರೀತಿ-ಪ್ರೇಮಕಥೆಯಲ್ಲಿ ಮಿಂಚುತ್ತಿದ್ದ ಪೃಥ್ವಿ ಅಂಬಾರ್ ಚೌಕಿದಾರ್ ಸಿನಿಮಾಗಾಗಿ ರಗಡ್ ಅವತಾರ ತಾಳಿದಿದ್ದಾರೆ.
ಚಂದ್ರಶೇಖರ್ ಬಂಡಿಯಪ್ಪನ ಕಥೆಗಳ ವಿಶೇಷತೆ ಎಂದರೆ, ನಿರೂಪಣೆಯಲ್ಲಿ ಸಂಶೋಧನೆ ಮತ್ತು ನವೀನತೆಯು ದೊಡ್ಡ ಪಾತ್ರ ವಹಿಸುತ್ತವೆ. ರಥಾವರ, ತಾರಕಾಸುರ ಮೊದಲಾದ ಚಿತ್ರಗಳ ನಂತರ, ಚೌಕಿದಾರ್ ಚಿತ್ರದಲ್ಲಿ ಅವರು ಯಾವ ಹೊಸ ಆವಿಷ್ಕಾರ ತೋರಿಸುತ್ತಾರೋ ಎಂದು ಸಿನಿಪ್ರಿಯರು ಉತ್ಸುಕರಾಗಿದ್ದಾರೆ.
ಚಿತ್ರವು ಶೀರ್ಷಿಕೆ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಬಿಡುಗಡೆ ಬಳಿಕ ಯಾವ ರೀತಿಯ ಹೈಪ್ ಪಡೆದುಕೊಳ್ಳಲಿದೆ ಎಂಬುದು ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳನ್ನು ಚಿತ್ರ ತಂಡ ಸೀಕ್ರೆಟ್ ಆಗಿಯೇ ಇಟ್ಟಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆದಿದ್ದು ಚಿತ್ರದ ಶೂಟಿಂಗ್ ನಡೆದಿದೆ.
‘ಚೌಕಿದಾರ್’ ಚಿತ್ರಕ್ಕೆ ಸಚಿನ್ ಬಸ್ರೂರು ಅವರು ಸಂಗೀತ ಕೊಡುತ್ತಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ ಮಾಡುತ್ತಿದ್ದು, ಜ್ಞಾನೇಶ್ವ್ ಬಿ ಮಠದ್ ಸಂಕಲನ, ರವಿ ವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆಯುತ್ತಿದ್ದಾರೆ. ಬಹುಭಾಷೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ, ಶಿಕ್ಷಣ ತಜ್ಞರಾದ ಕಲ್ಲಹಳ್ಳಿ ಚಂದ್ರಶೇಖರ್ ಅವರು ವಿಎಸ್ ಎಂಟರ್‌ಟೇನ್‌ಮೆಂಟ್ ಮೂಲಕ ಹಣ ಹಾಕುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.
Advertisement