ಡಾರ್ಲಿಂಗ್ ಕೃಷ್ಣ ಅಭಿನಯದ 'ಫಾದರ್' ಚಿತ್ರೀಕರಣ ಪೂರ್ಣ: ಮೋಷನ್ ಪೋಸ್ಟರ್ ರಿಲೀಸ್
ರಾಜ್ ಮೋಹನ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರಾಜ್ ಅಭಿನಯದ ಫಾದರ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಮೋಷನ್ ಪೋಸ್ಟರ್ ಅನ್ನು ನಟ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು.
ಕೆಲವು ದಿನಗಳ ಹಿಂದೂ ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ಆರ್ ಚಂದ್ರು, ಮೊದಲ ಬಾರಿಗೆ ಐದು ಸಿನಿಮಾಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆ ಪೈಕಿ ಆರ್ ಸಿ ಸ್ಟುಡಿಯೋಸ್ ನ ಮೊದಲ ಚಿತ್ರವಾಗಿ “ಫಾದರ್” ನಿರ್ಮಾಣವಾಗುತ್ತಿದೆ. ಈ ಚಿತ್ರದ ಮೋಷನ್ ಪೋಸ್ಟರ್ ನ್ನು ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜಕೀಯ ಮುಖಂಡರಾದ ಹೆಚ್ ಎಂ ರೇವಣ್ಣ, ನಟ ಅನೂಪ್ ರೇವಣ್ಣ, ಆನಂದ್ ಆಡಿಯೋ ಶ್ಯಾಮ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಪ್ಪ–ಮಗನ ಕುರಿತಾದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಪ್ರಕಾಶ್ ರೈ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ.
ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ನಂತರ ಸುದೀಪ್ ಅವರು, ಚಿತ್ರತಂಡಕ್ಕೆ ಶುಭ ಕೋರಿದರು. "ಫಾದರ್" ಚಿತ್ರದ ಮೋಷನ್ ಪೋಸ್ಟರ್ ಚೆನ್ನಾಗಿದೆ. ಆರ್ ಚಂದ್ರು ನನ್ನ ಸ್ನೇಹಿತ. ಅವರೊಟ್ಟಿಗೆ ಸದಾ ನಾನಿರುತ್ತೇನೆ. ಚಿತ್ರದಲ್ಲಿ ನಟಿಸಿರುವ ಕೃಷ್ಣ, ಅಮೃತ ಎಲ್ಲಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಬಳಿಕ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ತಿಳಿಸುತ್ತಾ ಮಾತು ಆರಂಭಿಸಿದ ನಿರ್ಮಾಪಕ ಆರ್ ಚಂದ್ರು ಅವರು, 22 ವರ್ಷಗಳ ಹಿಂದೆ 100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ನಾನು, ಈಗ "ಕಬ್ಜ" ದಂತಹ 100 ಕೋಟಿ ಸಿನಿಮಾ ಮಾಡಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಆಬಾರಿ. ಈ ಹಿಂದೆ ಸಿದ್ದೇಶ್ವರ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ 12 ಚಿತ್ರಗಳನ್ನು ನಿರ್ಮಿಸಿದ್ದ ನಾನು, ಈಗ ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದೇನೆ. ಈ ಸಂಸ್ಥೆಯ ಮೊದಲ ಚಿತ್ರ "ಫಾದರ್". ಅಪ್ಪ - ಮಗನ ಬಂಧವ್ಯದ ಕುರಿತಾದ ಸಿನಿಮಾವಿದು.
ನಿರ್ದೇಶಕ ರಾಜ್ ಮೋಹನ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಅಪ್ಪನ ಪಾತ್ರದಲ್ಲಿ ಖ್ಯಾತ ನಟ ಪ್ರಕಾಶ್ ರೈ ಹಾಗೂ ಮಗನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಮುಗಿದರೆ, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗುತ್ತದೆ. ಕನ್ನಡ ಚಿತ್ರ ವಿಶ್ವಮಟ್ಟದಲ್ಲಿ ವಿಜೃಂಭಿಸಬೇಕು ಎಂಬ ಆಸೆ ಇರುವವನು ನಾನು. ಹಾಗಾಗಿ ನಾನು ಆರ್ ಸಿ ಸ್ಟುಡಿಯೋಸ್ ಆರಂಭಿಸಿರುವುದು. ನಮ್ಮ ಸಂಸ್ಥೆಯ ಜೊತೆಗೆ ಬೇರೆಬೇರೆ ಭಾಷೆಗಳ ಹೆಸರಾಂತ ಸಂಸ್ಥೆಗಳ ಸಹಯೋಗವಿದೆ. ಎಲ್ಲಾ ಭಾಷೆಗೂ ಸಲ್ಲುವ ಕಥಾಹಂದರ ಹೊಂದಿರುವ "ಫಾದರ್" ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಹೇಳಿದರು.
ನಟ ‘ಡಾರ್ಲಿಂಗ್’ ಕೃಷ್ಣ ಮಾತನಾಡಿ, ‘ಈ ಕಥೆ ಕೇಳಿದಾಗ ನನಗಿಂತ ಮೊದಲು ಇಷ್ಟವಾಗಿದ್ದು ಮಿಲನಾ ಅವರಿಗೆ. ಈ ಚಿತ್ರವನ್ನು ನೀವು ಮಾಡಲೇಬೇಕೆಂದು ಅವರು ಹುರಿದುಂಬಿಸಿದರು. ಪ್ರಕಾಶ್ ರೈ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ‘ಫಾದರ್’ ತುಂಬಾ ದಿನಗಳವರೆಗೆ ಜನರ ಮನಸಿನಲ್ಲಿ ಉಳಿಯುವಂತ ಚಿತ್ರವಾಗುತ್ತದೆ'. ಸುದೀಪ್ ಅವರು ಬಂದು ಹಾರೈಸಿರುವ ನನ್ನ ಎಲ್ಲಾ ಸಿನಿಮಾಗಳು ಗೆದ್ದಿದೆ. ಈ ಚಿತ್ರ ಕೂಡ ಗೆಲ್ಲುತ್ತದೆ ಎಂಬ ನಂಬಿಕೆಯಿದೆ. ಸುದೀಪ್ ಅವರಿಗೆ ಧನ್ಯವಾದ ಎಂದರು.
ನಿರ್ದೇಶಕ ರಾಜ್ ಮೋಹನ್ ಮಾತನಾಡಿಸ ಎರಡು ಹಾಡುಗಳ ಚಿತ್ರೀಕರಣ ಮುಗಿದ ನಂತರ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲಿದೆ, ಅಪ್ಪ - ಮಗನ ಬಾಂಧವ್ಯದ ಚಿತ್ರಗಳು ಸಾಕಷ್ಟು ಬಂದಿದೆಯಾದರೂ, ಇದು ವಿಭಿನ್ನ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನಿರಾಸೆ ಮಾಡದ ಚಿತ್ರವಿದು ಎಂದು ತಿಳಿಸಿದರು.
ನಾಯಕ ನಟಿ ಅಮೃತಾ ಅಯ್ಯಂಗಾರ್ ಅವರು ಮಾತನಾಡಿ, ಫಾದರ್ ಚಿತ್ರಗ ಭಾಗವಾಗಿದ್ದಕ್ಕೆ ಬಹಳ ಸಂತಸವಿದೆ. ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ನನಗೆ ಹೆಮ್ಮೆ ಇದೆ. ನಿರ್ಮಾಪಕರಿಗೆ ನನ್ನ ಹೆಸರನ್ನು ಸೂಚಿಸಿದ ಮತ್ತು ಈ ಅವಕಾಶವನ್ನು ನೀಡಿದ ಕೃಷ್ಣ ಹಾಗೂ ಅವರ ಪತ್ನಿ ಮಿಲನಾ ನಾಗರಾಜ್ ನಾನು ಕೃತಜ್ಞನಾಗಿದ್ದೇನೆಂದು ಹೇಳಿದರು.
ನಟ ನಾಗಭೂಷಣ್ ಮಾತನಾಜಿ, "ಫಾದರ್" ಚಿತ್ರದಲ್ಲಿ ನನ್ನದು ಒಂದೊಳ್ಳೆಯ ಪಾತ್ರ. ಹಾಸ್ಯಗಳಲ್ಲಿ ನಾನು ನಟಿಸಿದ್ದರು, ನನಗೆ ಸಂತಸ ನೀಡಿದೆ. ಚಿತ್ರಗ ಭಾಗವಾಗಿದ್ದು ಸಂತಸ ತಂದಿದೆ. ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದು ಹೇಳಿದರು.
ಆನಂದ್ ಪಂಡಿತ್ ಅವರು ಪ್ರಸ್ತುತಪಡಿಸಿರುವ ಫಾದರ್ ಚಿತ್ರ ಬಹು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಸಂಭಾಷಣೆಯನ್ನು ಮಂಜು ಮಾಂಡವ್ಯ ಬರೆದಿದ್ದು, ಸುಗ್ನನ್ ಅವರ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತ ಚಿತ್ರಕ್ಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ