
ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರವು 100 ದಿನಗಳಿಗಿಂತ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಓಡಿದ್ದು, ಮ್ಯೂಸಿಕಲ್ ಹಿಟ್ ಸಿನಿಮಾವಾಗಿದೆ. ಇದಷ್ಟೇ ಅಲ್ಲದೆ, ಒಟಿಟಿ ವೇದಿಕೆಗಳಲ್ಲೂ ಇದು ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಮಾತುಕತೆಯಲ್ಲಿ ಗಣೇಶ್, 'ಸಿನಿಮಾ ಹಿಟ್ ಆಗುವುದು ಯಾವಾಗಲೂ ನಟನಿಗೆ ಒಳ್ಳೆಯದು. ಆದರೆ, ನಟನಾ ವೃತ್ತಿಯು ನಿರಂತರ ಪ್ರಯಾಣವಾಗಿದೆ. ನಾನು ಈಗಲೂ ಪ್ರತಿ ಕಥೆಯನ್ನು ಅದೇ ಉತ್ಸಾಹ ಮತ್ತು ಕುತೂಹಲದಿಂದ ಕೇಳುತ್ತೇನೆ. ಕಳೆದ 15 ವರ್ಷಗಳಿಂದಲೂ ನಾನು ಅದನ್ನೇ ಮಾಡುತ್ತಿದ್ದೇನೆ' ಎನ್ನುತ್ತಾರೆ.
ಮಾರುಕಟ್ಟೆಯ ಏರಿಳಿತ ಮತ್ತು ಸಂಭಾವನೆ ಬದಲಾಗುತ್ತಿದ್ದರೂ ಗಣೇಶ್ ನಟನೆಯತ್ತ ಮಾತ್ರ ಗಮನ ಹರಿಸಿದ್ದಾರೆ. 'ತುಂಬಾ ಬ್ಯುಸಿಯಾಗಿದ್ದೇನೆ ಎಂದು ನಾನು ಎಂದಿಗೂ ಹೇಳುವುದಿಲ್ಲ ಏಕೆಂದರೆ, ನಾನು ನಟನೆಯನ್ನು ನಿಜವಾಗಿಯೂ ಅನುಭವಿಸುತ್ತೇನೆ ಮತ್ತು ಆನಂದಿಸುತ್ತೇನೆ. ನಿಮ್ಮಿಷ್ಟದ ಸ್ಥಳ ಯಾವುದು ಎಂದು ಯಾರಾದರೂ ನನ್ನನ್ನು ಪ್ರಶ್ನಿಸಿದಾಗಲೆಲ್ಲಾ ನಾನು, 'ಅತ್ಯಂತ ಸಂತೋಷದ ಕ್ಷಣಗಳು ಕ್ಯಾಮರಾ ಮುಂದೆ ಮತ್ತು ಮನೆಯಲ್ಲಿ" ಎಂದು ಹೇಳುತ್ತೇನೆ ಎಂದರು.
ಸದ್ಯ ಗಣೇಶ್ ಅವರು ವಿಖ್ಯಾತ್ ಎಆರ್ ನಿರ್ದೇಶನದ 'Your's Sincerely ರಾಮ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಕೂಡ ಇದ್ದಾರೆ. ಅಲ್ಲದೆ ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಜನಪ್ರಿಯ ತೆಲುಗು ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯೊಂದಿಗೆ ಕೆಲಸ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಅವರ ಮುಂಬರುವ ಕನ್ನಡ ಚಿತ್ರಕ್ಕೆ ತಾತ್ಕಾಲಿಕವಾಗಿ PMF49 ಎಂದು ಹೆಸರಿಡಲಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯು ಕಾರ್ತಿಕೇಯ 2, ವೆಂಕಿ ಮಾಮ, ಓ ಬೇಬಿ, ಧಮಾಕಾ, ಮತ್ತು ನ್ಯೂ-ಸೆನ್ಸ್‌ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನಿರ್ಮಿಸಲು ಹೆಸರುವಾಸಿಯಾಗಿದೆ ಮತ್ತು ಇದು ಗಣೇಶ್ ಜೊತೆಗಿನ ಅವರ ನಾಲ್ಕನೇ ಕನ್ನಡ ಚಿತ್ರವಾಗಿದೆ. ಈಗಾಗಲೇ ಶರಣ್, ಧ್ರುವ ಸರ್ಜಾ ಮತ್ತು ಶ್ರೀಮುರಳಿ ಅವರೊಂದಿಗೆ ಸಂಸ್ಥೆ ಕೆಲಸ ಮಾಡಿದೆ.
ನೃತ್ಯದಲ್ಲಿ 20 ವರ್ಷಗಳ ಅನುಭವ ಹೊಂದಿರುವ ಪ್ರಸಿದ್ಧ ನೃತ್ಯ ಸಂಯೋಜಕ ಬಿ ಧನಂಜಯ (ಧನು ಮಾಸ್ಟರ್) ಚಿತ್ರ ನಿರ್ದೇಶಿಸಿದ್ದಾರೆ. ನಿರ್ಮಾಣ ಸಂಸ್ಥೆ ಮತ್ತು ಧನು ಅಸಾಧಾರಣ ಕಥೆಯನ್ನು ತಂದಿದ್ದಾರೆ. ನೃತ್ಯ ನಿರ್ದೇಶನದಲ್ಲಿನ ಅವರ ಅನುಭವವು ಅವರಿಗೆ ಸಿನಿಮಾದ ಬಗ್ಗೆ ಅಪಾರವಾದ ತಿಳಿವಳಿಕೆಯನ್ನು ನೀಡಿದೆ ಎಂದು ಗಣೇಶ್ ಹೇಳುತ್ತಾರೆ.
ಈ ಚಿತ್ರದಲ್ಲಿ, ಸಾಮಾನ್ಯ ಗಣೇಶ್ ಜೊತೆಗೆ ಹಿಂದೆಂದೂ ನೋಡಿರದ ರೀತಿಯಲ್ಲಿ ನನ್ನನ್ನು ನೀವು ನೋಡುತ್ತೀರಿ. ಮುಂದಿನ ವರ್ಷ ಫೆಬ್ರುವರಿಯಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
Advertisement