2024ರಲ್ಲಿ ತೆರೆ ಕಾಣಲು ಸಾಲು ಸಾಲು ಸಿನಿಮಾ ಸಿದ್ಧ; ಸ್ಟಾರ್ ನಟರ ಯಾವೆಲ್ಲಾ ಚಿತ್ರಗಳಿವೆ ನೋಡಿ...

ಕೆಜಿಎಫ್ ಚಾಪ್ಟರ್ 2 ಮತ್ತು ಕಾಂತಾರದಂತಹ ಹಿಟ್‌ಗಳೊಂದಿಗೆ 2022 ರಲ್ಲಿ ಪ್ರಾಮುಖ್ಯತೆ ಪಡೆದ ಪ್ಯಾನ್ ಇಂಡಿಯಾ ಟ್ರೆಂಡ್ 2024ರಲ್ಲೂ ಮುಂದುವರೆಯಲಿದೆ. ಪ್ರಮುಖ ನಟರ ಚಿತ್ರಗಳ ರಿಲೀಸ್ ದಿನಾಂಕಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆಗಳಿಲ್ಲದಿದ್ದರೂ, ಈ ವರ್ಷ ತೆರೆ ಕಾಣಲಿರುವ ಕೆಲವು ಚಿತ್ರಗಳ ಮುನ್ನೋಟ ಇಲ್ಲಿದೆ.
2024ರಲ್ಲಿ ತೆರೆ ಕಾಣಲು ಸಾಲು ಸಾಲು ಸಿನಿಮಾ ಸಿದ್ಧ
2024ರಲ್ಲಿ ತೆರೆ ಕಾಣಲು ಸಾಲು ಸಾಲು ಸಿನಿಮಾ ಸಿದ್ಧ

ಕೆಜಿಎಫ್ ಚಾಪ್ಟರ್ 2 ಮತ್ತು ಕಾಂತಾರದಂತಹ ಹಿಟ್‌ಗಳೊಂದಿಗೆ 2022 ರಲ್ಲಿ ಪ್ರಾಮುಖ್ಯತೆ ಪಡೆದ ಪ್ಯಾನ್ ಇಂಡಿಯಾ ಟ್ರೆಂಡ್ 2024ರಲ್ಲೂ ಮುಂದುವರೆಯಲಿದೆ. ಪ್ರಮುಖ ನಟರ ಚಿತ್ರಗಳ ರಿಲೀಸ್ ದಿನಾಂಕಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆಗಳಿಲ್ಲದಿದ್ದರೂ, ಈ ವರ್ಷ ಕನ್ನಡ ಸಿನಿಮಾ ಹೆಚ್ಚು ನಿರೀಕ್ಷೆಯನ್ನು ಹೊಂದಿದೆ. ಈ ವರ್ಷ ತೆರೆ ಕಾಣಲಿರುವ ಕೆಲವು ಚಿತ್ರಗಳ ಮುನ್ನೋಟ ಇಲ್ಲಿದೆ.

ಜನವರಿ ಮತ್ತು ಫೆಬ್ರುವರಿಯಲ್ಲಿ ರಕ್ಷಿತ್ ಶೆಟ್ಟಿ ಬೆಂಬಲಿತ ಅಭಿಜಿತ್ ಮಹೇಶ್ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ' ಮತ್ತು ಉಮಾಪತಿ ಶ್ರೀನಿವಾಸ್ ನಿರ್ಮಾಣದ ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಮನರಂಜನೆಯ ರಸದೌತಣ ನೀಡಲು ಎದುರು ನೋಡುತ್ತಿವೆ.

ವಿಜಯ್ ರಾಘವೇಂದ್ರ ಅಭಿನಯದ ಶ್ರೀ ಮಹಾದೇವ್ ಅವರ 'ಜಸ್ಟ್ ಪಾಸ್', 'ಕ್ಲಾಂತ' ಮತ್ತು ವಿಜಯ್ ರಾಘವೇಂದ್ರ ಹಾಗೂ ಭಾವನ ಅಭಿನಯದ 'ಕೇಸ್ ಆಫ್ ಕೊಂಡಾಣ' ಸಿನಿಮಾಗಳು ಜನವರಿ 26 ರಂದು ಬಿಡುಗಡೆಯಾಗಲಿವೆ. ಮಿಲನಾ ನಾಗರಾಜ್ ಅಭಿನಯದ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ', ಪೃಥ್ವಿ ಅಂಬರ್ ಅವರ 'ಫಾರ್ ರೆಜಿಸ್ಟ್ರೇಷನ್', ಅನೀಶ್ ನಟನೆಯ 'ಆರಾಮ್ ಅರವಿಂದ್ ಸ್ವಾಮಿ', ದೀಕ್ಷಿತ್ ಶೆಟ್ಟಿ ನಟನೆಯ 'ಕೆಟಿಎಂ', ರಾಜವರ್ದನ್ ಅಭಿನಯದ 'ಹಿರಣ್ಯ', 'ಶಾಖಾಹಾರಿ', 'ಮೂರನೇ ಕೃಷ್ಣಪ್ಪ', 'ಬ್ಲಿಂಕ್', ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಮತ್ತು ಸಂತೋಷ್ ಕೊಡೆಂಕರಿ ಅವರ 'ರವಿಕೆ ಪ್ರಸಂಗ' ಫೆಬ್ರುವರಿಯಲ್ಲಿ ತೆರೆಗೆ ಬರಲಿವೆ.

ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ 'ಇಬ್ಬನಿ ತಬ್ಬಿದ ಇಳೆಯಲಿ', ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ 2', ಪ್ರಜ್ವಲ್ ದೇವರಾಜ್ ಅವರ 'ಗಣ', 'ಮಾಫಿಯಾ' ಮತ್ತು 'ಕರಾವಳಿ', 'ದೈಜಿ', 'ಕೋಳಿ ಆಸ್ರ', ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ಮೊದಲ ಸಿನಿಮಾ 'ಫೈರ್ ಫ್ಲೈ', ವಿನಯ್ ರಾಜ್‌ಕುಮಾರ್ ಅವರ 'ಪೆಪೆ', 'ಗ್ರಾಮಾಯಣ', ಸಂಚಿತ್ ಸಂಜೀವ್ ಅವರ 'ಜಿಮ್ಮಿ' ಮತ್ತು ಲೈಕಾ ಪ್ರೊಡಕ್ಷನ್ಸ್ ಜೊತೆಗಿನ ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾ, ಚೇತನ್ ಕುಮಾರ್ ಅವರ 'ಬರ್ಮಾ', ನೀನಾಸಂ ಸತೀಶ್ ಅವರ 'ಮ್ಯಾಟಿನಿ' ಈ ವರ್ಷ ಚಿತ್ರಮಂದಿರಗಳಲ್ಲಿ ತೆರೆಕಾಣಲಿವೆ.

2023ರಲ್ಲಿ ಹಿಟ್ ಚಿತ್ರಗಳನ್ನು ನೀಡಿದ ರಾಜ್ ಬಿ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಇನ್ನೂ ತಮ್ಮ ಮುಂದಿನ ಪ್ರಾಜೆಕ್ಟ್ ಕುರಿತು ಘೋಷಣೆ ಮಾಡಿಲ್ಲ. ಸದ್ಯ ಈ ಸಿನಿಮಾಗಳು ಕನ್ನಡ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿವೆ. ಇವುಗಳು ಪ್ಯಾನ್ ಇಂಡಿಯಾ ಚಲನಚಿತ್ರಗಳ ನಿರೀಕ್ಷೆಗಳಿಗೆ ತಕ್ಕಂತೆ ಇರುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.

ಡೆವಿಲ್‌ನಲ್ಲಿ ನಟ ದರ್ಶನ್

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' 2023ರ ಕೊನೆಯಲ್ಲಿ ಬಿಡುಗಡೆಯಾಯಿತು. ಇದೀಗ ವರ್ಷದ ಆರಂಭದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ದರ್ಶನ್ ಅವರ ಮುಂದಿನ ಚಿತ್ರ 'ಡೆವಿಲ್- ದಿ ಹೀರೋ' ಈಗಾಗಲೇ ಕುತೂಹಲ ಕೆರಳಿಸಿದೆ. ತಾರಕ್ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಚಿತ್ರದ ನಿರ್ದೇಶಕರಾಗಿದ್ದಾರೆ. ಡೆವಿಲ್ ದರ್ಶನ್ ಅಭಿಮಾನಿಗಳಿಗೆ ಸೂಕ್ತ ಮನರಂಜನೆ ನೀಡುತ್ತದೆ ಎಂದು ಚಿತ್ರತಂಡ ಭರವಸೆ ನೀಡುತ್ತಿದೆ. ಸದ್ಯ ದರ್ಶನ್ ಬೇರಾವುದೇ ಸಿನಿಮಾ ಘೋಷಿಸಿಲ್ಲ.

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಮ್ಯಾಕ್ಸ್

ಕಿಚ್ಚ ಸುದೀಪ್ ಅವರ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಮ್ಯಾಕ್ಸ್ ಚಿತ್ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಮ್ಯಾಕ್ಸ್ ಕನ್ನಡವಷ್ಟೇ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಸುದೀಪ್ ಅವರ ಜನ್ಮದಿನದಂದು ಟೀಸರ್ ಬಿಡುಗಡೆಯಾಯಿತು. ಸುದೀಪ್ ಅವರು ನಿರ್ದೇಶಕ ಚೇರನ್ ಅವರೊಂದಿಗೆ ಸಹ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ- ದಿ ಲೆಜೆಂಡ್ ಚಾಪ್ಟರ್ 1

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ: ಲೆಜೆಂಡ್ ಚಾಪ್ಟರ್ 1 ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಫಸ್ಟ್ ಲುಕ್ ನವೆಂಬರ್ 27 ರಂದು ಬಿಡುಗಡೆಯಾಯಿತು. ಹೊಂಬಾಳೆ ಫಿಲ್ಮ್ಸ್ ಬೆಂಬಲದೊಂದಿಗೆ, ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಲಿದೆ. ಕಾಂತಾರ ಆಡಿಷನ್‌ಗೆ 25,000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ.

ಮಾರ್ಟಿನ್ ಮತ್ತು ಕೆಡಿ ಜೊತೆ ನಿರೀಕ್ಷೆ ಹುಟ್ಟಿಸಿದ ಧ್ರುವ ಸರ್ಜಾ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಪ್ಯಾನ್-ಇಂಡಿಯಾ ಸಿನಿಮಾ 'ಮಾರ್ಟಿನ್' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಎಪಿ ಅರ್ಜುನ್ ನಿರ್ದೇಶಿಸಿರುವ ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸಿದ್ದಾರೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಟೀಸರ್ ಬಿಡುಗಡೆಯಾಯಿತು. ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ಧ್ರುವ ಸರ್ಜಾ ಅವರು ಪ್ರೇಮ್ ನಿರ್ದೇಶನದ 'ಕೆಡಿ-ದಿ ಡೆವಿಲ್'ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಈ ವರ್ಷ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಚಿತ್ರದ ಮೂಲಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಚಿತ್ರದಲ್ಲಿ ವಿ ರವಿಚಂದ್ರನ್, ಸಂಜಯ್ ದತ್ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ

ನಟ ಧನುಷ್ ನಟನೆಯ ಬಹುಭಾಷಾ ಚಿತ್ರ 'ಕ್ಯಾಪ್ಟನ್ ಮಿಲ್ಲರ್' ಜನವರಿ 12ರಂದು ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ಧಮನಕ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭುದೇವ ಜೊತೆಗೆ ರಾಕ್‌ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಲಾದ ನಿರ್ದೇಶಕ ನರ್ತನ್ ಅವರ 'ಭೈರತಿ ರಣಗಲ್' ಚಿತ್ರ, ರಮೇಶ್ ರೆಡ್ಡಿ ನಿರ್ಮಾಣದ ಅರ್ಜುನ್ ಜನ್ಯ ಅವರ '45' ಸಿನಿಮಾಗಳು ಈ ವರ್ಷ ಬಿಡುಗಡೆಯಾಗಲಿದೆ. ಇದರ ಹೊರತಾಗಿ, ಲಕಿ ಗೋಪಾಲ್ ಅವರ IV ರಿಟರ್ನ್ಸ್ ಮತ್ತು ದಿನಕರ್ ತೂಗುದೀಪ ಅವರ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಬಘೀರ ಮೂಲಕ ಶ್ರೀಮುರಳಿ ಎಂಟ್ರಿ

ಮದಗಜ (2021) ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಶ್ರೀಮುರಳಿ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಘೀರ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಪ್ರಶಾಂತ್ ನೀಲ್ ಬರೆದಿರುವ ಕಥೆಗೆ ಡಾ. ಸೂರಿ ಅವರ ನಿರ್ದೇಶನವಿದೆ. ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದು, ಬಹುಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಉಪೇಂದ್ರ ಅವರ UI ಮೇಲೆ ಎಲ್ಲರ ಕಣ್ಣು

ರಿಯಲ್ ಸ್ಟಾರ್ ಉಪೇಂದ್ರ ಅವರು ಎಂಟು ವರ್ಷಗಳ ನಂತರ UI ಚಿತ್ರದ ಮೂಲಕ ನಿರ್ದೇಶಕರಾಗಿ ಆಗಮಿಸುತ್ತಿದ್ದಾರೆ. ಚಿತ್ರದ ವಿಶಿಷ್ಟವಾದ ಟೀಸರ್ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. UI ತಾಂತ್ರಿಕ ಆವಿಷ್ಕಾರಕ್ಕೆ ಭರವಸೆ ನೀಡುತ್ತದೆ ಮತ್ತು ಬಹುಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅವರ ನಿರ್ಮಾಣದಲ್ಲಿ ಬುದ್ಧಿವಂತ 2 ಚಿತ್ರ ಕೂಡ ಇದೆ.

ಯುವ ಸಿನಿಮಾ ಮೂಲಕ ಯುವರಾಜಕುಮಾರ್ ಎಂಟ್ರಿ

ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್, ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ತಯಾರಾದ ಮತ್ತು ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಕೂಡ ನಟಿಸಿದ್ದಾರೆ.

ಭೀಮ ಜೊತೆ ದುನಿಯಾ ವಿಜಯ್ ಪಯಣ

ಈ ವರ್ಷದ ಮೊದಲ ಮಾಸ್ ಎಂಟರ್‌ಟೈನರ್ ವಿಜಯ್ ಕುಮಾರ್ ಅವರ 'ಭೀಮ' ಸಿನಿಮಾ ಆಗಿದೆ. ಸಲಗ ನಂತರ ವಿಜಯ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಚಿತ್ರ ಫೆಬ್ರುವರಿಯಲ್ಲಿ ತೆರೆಕಾಣುವ ಸಾಧ್ಯತೆ ಇದೆ.

ಹಲವು ಸಿನಿಮಾಗಳಲ್ಲಿ ನಟ ಧನಂಜಯ್

2024ರ ಜನವರಿಯಲ್ಲಿ ನಟ ಧನಂಜಯ್‌ ಅವರ ಮೂರು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಕನ್ನಡ-ತೆಲುಗು ದ್ವಿಭಾಷಾ ಚಿತ್ರವಾದ 'ಝೀಬ್ರಾ', ಪರಮ್ ಅವರ ಚೊಚ್ಚಲ ನಿರ್ದೇಶನದ 'ಕೋಟಿ'ಗಾಗಿ ಎದುರು ನೋಡುತ್ತಿದ್ದಾರೆ. ಇದಲ್ಲದೆ ಬಡವ ರಾಸ್ಕಲ್ ನಿರ್ದೇಶಕ ಶಂಕರ್ ಗುರು ಅವರೊಂದಿಗೆ 'ಅಣ್ಣಾ ಫ್ರಮ್ ಮೆಕ್ಸಿಕೋ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಪದಕಿ ಅವರ ಉತ್ತರಕಾಂಡದಲ್ಲಿಯೂ ಧನಂಜಯ್ ಕಾಣಿಸಿದ್ದು, ಚಿತ್ರದಲ್ಲಿ ನಟಿ ರಮ್ಯಾ ಕೂಡ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com